ಬೆಳಗಾವಿ: ಕಬ್ಬಿನ ಬೆಲೆ ನಿಗದಿ ಹಾಗೂ ಪ್ರೋತ್ಸಾಹಧನಕ್ಕಾಗಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಪಡಿಸುತ್ತಿದ್ದ ಕಬ್ಬು ಬೆಳೆಗಾರರು ಇದೀಗ ತಮ್ಮ ಹೋರಾಟವನ್ನು ವಾಪಸ್ ಪಡೆದಿದ್ದಾರೆ. ನಾಳೆಯಿಂದ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿದ್ದು, ಕಾರ್ಖಾನೆಗಳ ಆರಂಭಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಪೊಲೀಸ್ ವಶದಿಂದ ಬಿಡುಗಡೆಯಾದ ಬಳಿಕ ಪೊಲೀಸ್ ಕ್ವಾರ್ಟರ್ಸ್ನಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಮಾತನಾಡಿದ ಚೂನಪ್ಪ ಪೂಜಾರಿ, ಕಬ್ಬಿನ ದರ ನಿಗದಿ ವಿಚಾರದಲ್ಲಿ ರೈತರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3,800 ರೂಪಾಯಿ ದರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಸಚಿವ ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆ ವಹಿಸಿದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ನೀಡಲು ಒಪ್ಪಿಕೊಂಡಿದ್ದಾರೆ. ಈ ದರ ನಿಗದಿ ನಮಗೆ ತೃಪ್ತಿ ತಂದಿದೆ ಎಂದು ಚೂನಪ್ಪ ಪೂಜಾರಿ ಹೇಳಿದ್ದಾರೆ.
ಇದರ ಜೊತೆಗೆ ಈ ಬಾರಿ ಸಕ್ಕರೆ ಮಾರಾಟದ ಮೇಲೆಯೂ ರೈತರಿಗೆ ಲಾಭಾಂಶ ನೀಡಲು ಒಪ್ಪಿಗೆ ಸಿಕ್ಕಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಹಿಂದೆ ಸಕ್ಕರೆ ಮಾರಾಟದ ಲಾಭದಲ್ಲಿ ರೈತರಿಗೆ ಪಾಲು ಸಿಗುತ್ತಿರಲಿಲ್ಲ. ಆದರೆ ಇದೀಗ ಸಕ್ಕರೆ ಮಾರಾಟದಿಂದಲೂ ರೈತರಿಗೆ ಹೆಚ್ಚುವರಿ ಹಣ ನೀಡಲು ಕಾರ್ಖಾನೆಗಳು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ಕೆ.ಜಿ. ಸಕ್ಕರೆಗೆ 50 ರೂಪಾಯಿ ಮಾರಾಟ ದರ ಬಂದರೆ ರೈತರಿಗೆ ಹೆಚ್ಚುವರಿಯಾಗಿ 500 ರೂಪಾಯಿ ಲಾಭಾಂಶ ಸಿಗಲಿದೆ ಎಂದು ಚೂನಪ್ಪ ಪೂಜಾರಿ ಮಾಹಿತಿ ನೀಡಿದ್ದಾರೆ. ಈ ನಿರ್ಧಾರ ರೈತರ ಹೋರಾಟದ ಮೊದಲ ಜಯ ಎಂದು ಅವರು ಬಣ್ಣಿಸಿದ್ದಾರೆ.
ಇನ್ನು ಗುರ್ಲಾಪುರದಲ್ಲಿಯೂ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ನಾಳೆ ಗುರ್ಲಾಪುರದಲ್ಲಿ ರೈತರು ಬೃಹತ್ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲಿದ್ದಾರೆ. ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಆರಂಭವಾಗಲಿದ್ದು, ರೈತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದರೆ ರೈತರ ಹೋರಾಟ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 1,000 ರೂಪಾಯಿ ಪ್ರೋತ್ಸಾಹಧನ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಬೆಳಗಾವಿ ಅಧಿವೇಶನದ ಒಳಗಾಗಿ ಮುಖ್ಯಮಂತ್ರಿ ಅವರು 1,000 ರೂಪಾಯಿ ಪ್ರೋತ್ಸಾಹಧನ ಘೋಷಿಸಬೇಕು. ಇಲ್ಲದಿದ್ದರೆ ಅಧಿವೇಶನದ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ ಎಂದು ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕಬ್ಬಿನ ದರ ವಿಚಾರದಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ಸದ್ಯಕ್ಕೆ ವಿರಾಮ ಸಿಕ್ಕಿದ್ದು, ಪ್ರೋತ್ಸಾಹಧನದ ಬೇಡಿಕೆಗಾಗಿ ಹೋರಾಟ ಮುಂದುವರಿಯಲಿದೆ.





