ಪೋರ್ಚುಗಲ್ನ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ವಿಡಿಯೋ ಸಂದೇಶ ಹಂಚಿಕೊಂಡಿರುವ 41 ವರ್ಷದ ರೊನಾಲ್ಡೊ, ರಾಷ್ಟ್ರೀಯ ತಂಡದ ಪರ ತಮ್ಮ 23 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಎಳೆಯುವ ನಿರ್ಧಾರ ಪ್ರಕಟಿಸಿದ್ದಾರೆ. ನವೆಂಬರ್ ತಿಂಗಳ ಅಂತಾರಾಷ್ಟ್ರೀಯ ಪಂದ್ಯಗಳ ವಿರಾಮದ ಬಳಿಕ ಪೋರ್ಚುಗಲ್ ತಂಡದ 7ನೇ ಸಂಖ್ಯೆಯ ಜೆರ್ಸಿಯನ್ನು ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.
2003ರಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ರೊನಾಲ್ಡೊ, ಎರಡು ದಶಕಗಳಿಗೂ ಹೆಚ್ಚು ಕಾಲ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ತಮ್ಮ ವೃತ್ತಿಜೀವನದಲ್ಲಿ ಪೋರ್ಚುಗಲ್ ಪರ 234 ಪಂದ್ಯಗಳನ್ನಾಡಿ 146 ಗೋಲುಗಳನ್ನು ಗಳಿಸಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಹಾಗೂ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ವಿಶ್ವ ದಾಖಲೆಯೊಂದಿಗೆ ಅವರು ವಿದಾಯ ಹೇಳುತ್ತಿದ್ದಾರೆ.
ಪೋರ್ಚುಗಲ್ಗೆ ಮೂರು ಪ್ರಮುಖ ಟ್ರೋಫಿ
Portugal estará sempre em mim https://t.co/dnFj51rxmh
— Cristiano Ronaldo (@Cristiano) November 5, 2026
ರೊನಾಲ್ಡೊ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2016ರ ಯುರೋ ಕಪ್ ಗೆಲುವು ಅತ್ಯಂತ ಸ್ಮರಣೀಯ ಸಾಧನೆ. ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರೂ, ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, 2019 ಮತ್ತು 2025ರಲ್ಲಿ ನಡೆದ UEFA ನೇಷನ್ಸ್ ಲೀಗ್ ಟೂರ್ನಿಗಳಲ್ಲೂ ಪೋರ್ಚುಗಲ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗೆ ತಮ್ಮ ದೇಶಕ್ಕೆ ಮೂರು ಪ್ರಮುಖ ಅಂತಾರಾಷ್ಟ್ರೀಯ ಟ್ರೋಫಿಗಳನ್ನು ತಂದುಕೊಡುವಲ್ಲಿ ಕೊಡುಗೆ ನೀಡಿದ್ದಾರೆ.
ವಿದಾಯದ ವಿಡಿಯೋದಲ್ಲಿ ರೊನಾಲ್ಡೊ ಹೇಳಿದ್ದೇನು?
ತಮ್ಮ ವಿದಾಯದ ವಿಡಿಯೋದಲ್ಲಿ ಪೋರ್ಚುಗಲ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ರೊನಾಲ್ಡೊ, ರಾಷ್ಟ್ರೀಯ ತಂಡದ 7ನೇ ಸಂಖ್ಯೆಯ ಜೆರ್ಸಿಯನ್ನು ಹಸ್ತಾಂತರಿಸುವ ಸಮಯ ಬಂದಿದೆ ಎಂದು ಭಾವುಕರಾಗಿದ್ದಾರೆ.
“ಆ ಜೆರ್ಸಿ ಎಂದಿಗೂ ನನಗೆ ಮಾತ್ರ ಸೇರಿದ್ದಲ್ಲ. ಆದರೆ 23 ವರ್ಷಗಳ ಕಾಲ ಅದನ್ನು ಧರಿಸುವ, ರಕ್ಷಿಸುವ ಮತ್ತು ವಿಶ್ವದಾದ್ಯಂತದ ಕ್ರೀಡಾಂಗಣಗಳಿಗೆ ಕೊಂಡೊಯ್ಯುವ ಸೌಭಾಗ್ಯ ಹಾಗೂ ಜವಾಬ್ದಾರಿ ನನಗೆ ದೊರೆತಿತ್ತು” ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುವ ನಿರ್ಧಾರ ಸುಲಭವಾಗಿರಲಿಲ್ಲ ಎಂದಿರುವ ಅವರು, ಮುಂದಿನ ಪೀಳಿಗೆಯ ಆಟಗಾರರಿಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.
“ಕೆಲವು ನಿರ್ಧಾರಗಳನ್ನು ಕೇವಲ ಮನಸ್ಸಿನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವು ಹೃದಯದಿಂದಲೂ ನಿರ್ಧಾರವಾಗುತ್ತವೆ. ಆಗಸ್ಟ್ 2003ರಲ್ಲಿ ಆರಂಭವಾದ ನನ್ನ ಪ್ರಯಾಣ ನನ್ನ ಜೀವನವನ್ನೇ ಶಾಶ್ವತವಾಗಿ ಬದಲಿಸಿತು. ಇದೀಗ ಆ ಪ್ರಯಾಣ ಅಂತ್ಯಗೊಂಡಿದೆ” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ರೊನಾಲ್ಡೊ ಅವರ ಈ ನಿರ್ಧಾರದಿಂದ ವಿಶ್ವ ಫುಟ್ಬಾಲ್ನ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ. ದಾಖಲೆಗಳು, ಪ್ರಶಸ್ತಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿರುವ ಈ ದಿಗ್ಗಜ ಆಟಗಾರನ ಅಂತಾರಾಷ್ಟ್ರೀಯ ವಿದಾಯ ಕ್ರೀಡಾಭಿಮಾನಿಗಳಲ್ಲಿ ಭಾವುಕ ಕ್ಷಣವಾಗಿ ಉಳಿಯಲಿದೆ.





