ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಭಯಾನಕ ಘಟನೆ ನಡೆದಿದೆ. 21 ವರ್ಷದ ಅಕ್ಷತ್ ಪ್ರತಾಪ್ ಸಿಂಗ್ ಎಂಬ ಯುವಕನು ತನ್ನ 49 ವರ್ಷದ ತಂದೆ ಮನ್ವೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದು, ದೇಹವನ್ನು ತುಂಡು ಮಾಡಿ, ಭಾಗಗಳನ್ನು ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಫೆಬ್ರವರಿ 20ರಂದು ಬೆಳಿಗ್ಗೆ ಸುಮಾರು 4.30ಕ್ಕೆ ನಡೆದಿದೆ.
ಮನ್ವೇಂದ್ರ ಸಿಂಗ್ ಅವರು ಔಷಧಿ ಮತ್ತು ಮದ್ಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಅವರು ತಮ್ಮ ಮಗ ಅಕ್ಷತ್ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಯಾದ ನೀಟ್‌ಗೆ ತಯಾರಿ ಮಾಡಿ, ಡಾಕ್ಟ್‌ರ್ ಆಗಬೇಕು ಎಂದು ಬಲವಂತ ಮಾಡುತ್ತಿದ್ದರು. ಆದರೆ ಅಕ್ಷತ್ ಅದಕ್ಕೆ ವಿರೋಧಿಸುತ್ತಿದ್ದ. ಇದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಒಮ್ಮೆ ಅಕ್ಷತ್ ಮನೆಯಿಂದ ಓಡಿಹೋಗಿದ್ದನು. ಇದಾದ ಬಳಿಕ ಇಬ್ಬರ ನಡುವೇ ಇದೇ ವಿಚಾರವಾಗಿ ಮೆನಯಲ್ಲಿ ತೀವ್ರ ಗಲಾಟೆಯಾಗುತ್ತಿತ್ತು.
ಘಟನೆ ಹಿನ್ನೆಲೆ
ಫೆಬ್ರವರಿ 20ರಂದು ಸಂಜೆಯಿಂದ ಮನ್ವೇಂದ್ರ ಸಿಂಗ್ ನಾಪತ್ತೆಯಾಗಿದ್ದರು. ಪೊಲೀಸರು ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ, ನೀಲಿ ಡ್ರಮ್‌ನಲ್ಲಿ ಮನ್ವೇಂದ್ರ ಸಿಂಗ್‌ನ ತಲೆ ಸೇರಿದಂತೆ ದೇಹದ ಇತರೆ ಭಾಗಗಳು ಕಂಡುಬಂದವು. ತೀವ್ರ ವಿಚಾರಣೆಯ ನಂತರ ಅಕ್ಷತ್ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಅವನು ತಂದೆಯ ಲೈಸೆನ್ಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಎಳೆದೊಯ್ದು, ಖಾಲಿ ಕೋಣೆಯಲ್ಲಿ ದೇಹವನ್ನ ಹರಿತವಾದ ಆಯುಧದಿಂದ ತುಂಡು ಮಾಡಿದ್ದಾನೆ.
ಈ ಸಮಯದಲ್ಲಿ ಅವನ ಸಹೋದರಿ ಕೃತಿ ಘಟನೆಯನ್ನು ನೋಡಿದಳು. ಆದರೆ ಅಕ್ಷತ್ ಅವಳನ್ನು ಹೆದರಿಸಿ ಮೌನವಾಗಿರುವಂತೆ ಬೆದರಿಕೆ ಹಾಕಿದನು. ಆಕೆಯ ಮುಂದೆಯೇ ದೇಹವನ್ನು ತುಂಡು ಮಾಡಿ, ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ, ಕೆಲವು ಭಾಗಗಳನ್ನು ಮನೆಯ ಹತ್ತಿರದಲ್ಲಿ ವಿಲೇವಾರಿ ಮಾಡಿದನು. ಮುಂಡ ಮತ್ತು ಇತರ ಭಾಗಗಳನ್ನು ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟನು. ಕೆಲವು ಭಾಗಗಳನ್ನು ಕೆರೋಸಿನ್ ಹಾಕಿ ಸುಡುವ ಯೋಜನೆಯೂ ಇತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ಅಕ್ಷತ್ ಅನ್ನು ಬಂಧಿಸಿ ಕಸ್ಟಡಿಯಲ್ಲಿ ಇರಿಸಿದ್ದಾರೆ. ವಿಧಿವಿಜ್ಞಾನ ತಂಡವನ್ನು ಕರೆಯಲಾಗಿದ್ದು, ಮನೆಯಿಂದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ದೇಹದ ಉಳಿದ ಭಾಗಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆಶಿಯಾನಾ ಪ್ರದೇಶದ ಹಿರಿಯ ಅಧಿಕಾರಿ ವಿಕ್ರಾಂತ್ ವೀರ್ ಅವರು, ಸಾಕ್ಷ್ಯಗಳ ಆಧಾರದ ಮೇಲೆ ಸಂಬಂಧಿತ ಕಾನೂನು ವಿಭಾಗಗಳ ಅಡಿ ಪ್ರಕರಣ ದಾಖಲಿಸಲಾಗುವುದು ಮತ್ತು ಮುಂದಿನ ಕ್ರಮಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.





