ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿರುವ ಆಕಾಶ್ ಕಾಲೇಜ್‌ನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ನಡೆಸಿರುವ ರ‍್ಯಾಗಿಂಗ್ ಮತ್ತು ಹಲ್ಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜೂನಿಯರ್ಸ್‌ಗೆ ಡ್ರಿಂಕ್ಸ್, ಸಿಗರೇಟ್ ತರಿಸುವಂತೆ ಒತ್ತಾಯಿಸಿ, ಬುಕ್ಸ್ ಹಿಡಿದು ನಿಲ್ಲಿಸಿ ರ‍್ಯಾಗಿಂಗ್ ಮಾಡಿದ್ದಕ್ಕೆ ಸಂಬಂಧಿಸಿ 23 ಹಿರಿಯ ವಿದ್ಯಾರ್ಥಿಗಳ ಮೇಲೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ ದೂರನ್ನು ಪ್ರಶ್ನಿಸಿದ ಕಾಲೇಜಿನ ಅಡ್ಮಿನ್ ಹೆಡ್ ಮಿದುನ್ ಮಾಧವನ್ ಮೇಲೆ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪವಿದೆ. ಇದಲ್ಲದೆ ಜೂನಿಯರ್ ವಿದ್ಯಾರ್ಥಿಗಳ ಮೇಲೂ ಕಬ್ಬಿಣದ ರಾಡ್, ಕಲ್ಲು, ಕಟ್ಟಿಗೆಗಳಿಂದ ಹಲ್ಲೆ ನಡೆಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ದೂರು ಆಧರಿಸಿ ದೇವನಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ಆಧಾರದಲ್ಲಿ A1 ಬಿಲಾಲ್, A2 ಝಿರಿಲ್, A3 ಮಿಶಾಲ್ ಎಂಬ ಮೂವರು ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಹುಡುಕಾಟ ಮುಂದುವರೆದಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ರ‍್ಯಾಗಿಂಗ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿರುವುದರೂ, ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂತಹ ಘಟನೆಗಳು ಪದೇಪದೇ ಸಂಭವಿಸುತ್ತಿರುವುದು ಆತಂಕಕಾರಿಯಾಗಿದೆ. ಈ ಪ್ರಕರಣದಿಂದ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯಕರ ಶೈಕ್ಷಣಿಕ ವಾತಾವರಣದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ. ಕಾಲೇಜು ಆಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುವ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





