ಮೈಸೂರು, ಅಕ್ಟೋಬರ್ 18: ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ವಿವಿಧ ಕ್ರೀಡೆಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂಭ್ರಮದ ದಸರಾ ಮಧ್ಯೆ ಮೈಸೂರಿನಲ್ಲಿ ಹಿಂದೂ ದೇವಸ್ಥಾನದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರಗಳನ್ನು ಬಿಡಿಸಿರುವ ಘಟನೆ ವಿವಾದ ಎಬ್ಬಿಸಿದೆ.
ಘಟನೆಯ ವಿವರ
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ದೇಗುಲ ಆವರಣದ ಗೋಡೆಯ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ ಹಾಗೂ ಹಸಿರು ಬಣ್ಣದಲ್ಲಿ ಮಸೀದಿ ಚಿತ್ರವನ್ನು ಬಿಡಿಸಲಾಗಿದೆ. ಇದನ್ನು ಕಂಡ ಸ್ಥಳೀಯ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರ ಬರೆಯಲು ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಬ್ಬರ ವಿರುದ್ಧ FIR ದಾಖಲು
ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆ.ಆರ್.ನಗರ ತಾಲೂಕು ಎಡತೊರೆ ಗ್ರಾಮದಲ್ಲಿರುವ ದೇವಾಲಯಕ್ಕೆ ತಹಶೀಲ್ದಾರ್ ಸುರೇಂದ್ರ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ದೇವಾಲಯ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಬಿಡಿಸಿರುವುದು ಕಂಡುಬಂದಿದೆ. ಹೀಗಾಗಿ ತಹಶೀಲ್ದಾರ್ ಸುರೇಂದ್ರ ಮೂರ್ತಿ ಅವರು ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ಧ ದೂರು ದಾಖಲಿಸಿದ್ದು, ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರತಾಪ್ ಸಿಂಹ ಆಕ್ರೋಶ
ಈ ಬಗ್ಗೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದು, “ಕೆ.ಆರ್.ನಗರ ತಾಲೂಕಿನ ಪ್ರಖ್ಯಾತ ಅರ್ಕೇಶ್ವರ ದೇವಸ್ಥಾನದ ನವೀಕರಣ ನಡೆಯುತ್ತಿದ್ದು, ಅಚಾನಕ್ಕಾಗಿ ಮಸೀದಿ ಚಿತ್ರವನ್ನು ದೇವಸ್ಥಾನದ ಮೇಲೆ ಬಿಡಿಸಲಾಗಿದೆ. ಕೂಡಲೇ ತೆಗೆಯುತ್ತಿರೋ, ಇಲ್ಲದಿದ್ದರೆ ನಾನೇ ಬಂದು ತೆಗೆಸಬೇಕೋ?” ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ “ಮುಸಲ್ಮಾನರನ್ನು ದೂಷಿಸಬೇಡಿ, ಇದಕ್ಕೆ ಬೆರಕೆ ಹಿಂದೂಗಳೇ ಕಾರಣ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ಆಕ್ರೋಶ
ಈ ಘಟನೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಅರ್ಕೇಶ್ವರ ದೇವಾಲಯದ ಮೇಲೆ ಮಸೀದಿ ಮತ್ತು ಶಿಲುಬೆ ಬಿಡಿಸಿದ್ದೇಕೆ? ಈ ಸರ್ಕಾರಿ ಆದೇಶ ಹೊರಡಿಸಿದವರು ಯಾರು? ಅನುಮತಿ ಕೊಟ್ಟಿದ್ದಾರು ಯಾರು? ಮಸೀದಿ-ಚರ್ಚ್ನ ಒಳಗೆ ತ್ರಿಶೂಲ, ‘ಓಂ’ ಚಿತ್ರಿಸಲು ಅನುಮತಿ ನೀಡ್ತಾರಾ? ಕರ್ನಾಟಕದ ಹಿಂದೂಗಳಿಗೆ ಉತ್ತರಗಳು ಸಿಗಲೇಬೇಕು” ಎಂದು ಆಶೋಕ್ ಕಿಡಿ ಹೇಳಿದ್ದಾರೆ.
ಈ ರೀತಿಯ ಚಿತ್ರಗಳನ್ನು ಬಿಡಿಸಲು ಯಾರು ಹೇಳಿದ್ದು? ಯಾಕಾಗಿ ಈ ರೀತಿಯ ಚಿತ್ರಗಳನ್ನು ಬಿಡಿಸಲಾಗಿದೆ? ಎಂಬುದು ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





