ಬೆಂಗಳೂರು: ಪಟ್ಟು ಹಿಡಿದ ಸಾಧಿಸುವ ಛಲ ಇದ್ದಲ್ಲಿ ಅದು ಯಾವ ಮಟ್ಟಕ್ಕೆ ಮುಟ್ಟಿಸಬಲ್ಲದು ಎಂಬುದಕ್ಕೆ ಒಂದು ಉದಾಹರಣೆ ಆಗಿ ವೀಣಾ ಎಸ್. ರೆಡ್ಡಿ ನಮ್ಮೆದುರು ಸಾಧನೆ ಮಾಡಿ ತೋರಿಸಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಎರಡನೇ ಫೇಸ್ ನಿವಾಸಿಗಳಾದ, ಚಾರ್ಟರ್ಡ್ ಅಕೌಂಟೆಂಟ್ ಜನಾರ್ದನ್ ರೆಡ್ಡಿ ಹಾಗೂ ಲಕ್ಷ್ಮೀದೇವಿ ದಂಪತಿಯ ಮಗಳು ವೀಣಾ ಎಸ್. ರೆಡ್ಡಿ. 2015ನೇ ಇಸವಿಯಲ್ಲಿ ಪಿಯುಸಿಯಲ್ಲಿ ಕರ್ನಾಟಕಕ್ಕೇ ಮೊದಲ ಸ್ಥಾನ ಗಳಿಸಿದ ಈ ಹೆಣ್ಣುಮಗಳು, ಆಂಧ್ರಜ್ಯೋತಿ ಸೇರಿದಂತೆ ಇತರ ಪತ್ರಿಕೆಗಳಿಗೂ ಸಂದರ್ಶನ ನೀಡಿದ್ದರು.
ತನಗೆ ಕಾನೂನಿನ ಕೋರ್ಸ್ ಸೇರುವ ಆಸೆ ಇದೆ ಎಂಬುದನ್ನು ಹೇಳಿಕೊಂಡಿದ್ದರು. ಆದರೆ ಬೆಂಗಳೂರಿನ ಎನ್ಎಸ್ಎಲ್ (ನ್ಯಾಷನಲ್ ಸ್ಕೂಲ್ ಆಫ್ ಲಾ) ಅಲ್ಲಿ ಸೀಟು ದೊರೆಯಲಿಲ್ಲ. ಕೋಲ್ಕತ್ತಾದಲ್ಲಿ ಎನ್ಎಲ್ಎಸ್ ನಲ್ಲಿ ಸೀಟು ಸಿಕ್ಕಿದರೂ ಅಲ್ಲಿಗೆ ವೀಣಾ ಹೋಗಲಿಲ್ಲ.
ಆ ನಂತರ ಆಕೆ ಆರಿಸಿಕೊಂಡ ಹಾದಿ ಬಿ.ಕಾಂ., ಸಿಎ, ಸಿಎಸ್ ಕೋರ್ಸ್ ನದು. ಬಿಕಾಂನಲ್ಲಿ ವೀಣಾ ರ್ಯಾಂಕ್ ಪಡೆದುಕೊಂಡರು. ಕಂಪನಿ ಸೆಕ್ರೆಟರಿ (ಸಿಎಸ್) ಕೋರ್ಸ್ ನಲ್ಲಿ ಅಖಿಲ ಭಾರತದ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದು, ಎಲ್ಲ ವಿಷಯಗಳಲ್ಲೂ ಸೇರಿ ಒಟ್ಟು ಹದಿನಾರು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಪ್ರಖ್ಯಾತವಾದ ಪಿಡಬ್ಲ್ಯುಸಿ ಅಲ್ಲಿ ಕಾನೂನು ಸಲಹೆಗಾರರಾಗಿ ಒಂದು ವರ್ಷ, ಜಿಎಸ್ ಟಿಯಲ್ಲಿ ಬಹಳ ಪ್ರಮುಖ ಕಂಪನಿ ಗಂಗಾ ಅಸೋಸಿಯೇಟ್ ನಲ್ಲಿ ಸಲಹೆಗಾರರಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿದರು. ಸಾಧಿಸುವ ಛಲ ಹಾಗೂ ಏಕಾಗ್ರತೆಯೊಂದಿಗೆ ಗುರಿಯ ಕಡೆಗೆ ಸಾಗಿದರೆ ಅಂದುಕೊಂಡಿದ್ದನ್ನು ದಕ್ಕಿಸಿಕೊಳ್ಳಲು ಖಂಡಿತಾ ಸಾಧ್ಯ ಎಂಬ ಉದಾಹರಣೆಯಾಗಿ ವೀಣಾ ರೆಡ್ಡಿ ಅವರು ಕೂಡ ಹೊಸ ಸೇರ್ಪಡೆಯಾಗಿ ಕಾಣುತ್ತಾರೆ.





