ಬಿಗ್ ಬಾಸ್ ಕನ್ನಡ ಸೀಸನ್ 12 ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ಮನೆಯಲ್ಲಿ ಜಗಳ, ವ್ಯಂಗ್ಯ, ಟಾಂಗ್‌ಗಳು ಮತ್ತಷ್ಟು ತೀವ್ರವಾಗುತ್ತಿವೆ. ಆರಂಭದಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಬ್ಬರಿಗೊಬ್ಬರು ಸಿಕ್ಕ ಚಾನ್ಸ್ ಬಿಡದೇ ಟೀಕಿಸುವುದು, ಕಾಲೆಳೆಯುವುದು ಈ ಜೋಡಿಯಲ್ಲಿ ಹೊಸದೇನಲ್ಲ. ಆದರೆ ಈ ಬಾರಿ ನಡೆದ ಘಟನೆ ಮನೆಮಾತಾಗಿದ್ದು, ವೀಕ್ಷಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನೇನು ಬಿಗ್ ಬಾಸ್ ಮುಗಿಯಲು ಕೇವಲ ಎರಡು ವಾರಗಳು ಮಾತ್ರ ಬಾಕಿ ಇರುವಾಗಲೂ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ವೈಮನಸ್ಸು ನಿಂತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚುತ್ತಲೇ ಇದೆ. ಇತ್ತೀಚಿನ ಎಪಿಸೋಡ್‌ನಲ್ಲಿ ಈ ಜಗಳ ಹೊಸ ತಿರುವು ಪಡೆದುಕೊಂಡಿದೆ.
ಕಿಚನ್‌ನಲ್ಲಿ ಆರಂಭವಾದ ಟಾಂಗ್!
ಮನೆಯ ಕಿಚನ್‌ನಲ್ಲಿ ಕ್ಲೀನಿಂಗ್ ಕೆಲಸದಲ್ಲಿ ನಿರತರಾಗಿದ್ದ ಗಿಲ್ಲಿ ನಟ, ನೀರು ಕುಡಿಯಲು ಬಂದ ಅಶ್ವಿನಿ ಗೌಡಗೆ ತೀವ್ರವಾದ ಟಾಂಗ್ ಕೊಟ್ಟಿದ್ದಾರೆ. ಅಶ್ವಿನಿ ಅವರು ಹಿಂದೊಮ್ಮೆ ಧ್ರುವಂತ್ ಬಳಿ ರಕ್ಷಣೆ ಕೇಳಿಕೊಂಡ ಸಂದರ್ಭವನ್ನು ವ್ಯಂಗ್ಯವಾಗಿ ಇಮಿಟೇಟ್ ಮಾಡಿದ ಗಿಲ್ಲಿ ನಟ, “ನಾನೊಬ್ಬಳೇ ಇದ್ದಾಗ ಇವರಿಂದ ನನಗೆ ಮೆಂಟಲ್ ಟಾರ್ಚರ್ ಆಗ್ತಿದೆ. ಧ್ರುವ್, ನನಗೆ ಹೆಲ್ಪ್ ಮಾಡಿ… ನನಗೆ ಪ್ರೊಟೆಕ್ಷನ್ ಕೊಡಿ ಧ್ರುವ್…” ಎಂದು ಅಶ್ವಿನಿ ಶೈಲಿಯಲ್ಲೇ ಹೇಳಿ ಅಣಕಿಸಿದ್ದಾರೆ.
ಇದೇ ವೇಳೆ ಗಿಲ್ಲಿ ನಟ ನೇರವಾಗಿ ಅಶ್ವಿನಿಯ ಕ್ಯಾಪ್ಟನ್ಸಿ ವಿಚಾರವನ್ನು ಎಳೆದು ತಂದಿದ್ದಾರೆ. “ವಯಸ್ಸಾಯ್ತು ಪಾಪ… ಕ್ಯಾಪ್ಟನ್ ಆಗೋಕೆ ಆಗಲಿಲ್ಲ. ಒಂದು ಉಸ್ತುವಾರಿಯನ್ನೂ ಸರಿಯಾಗಿ ಮಾಡೋಕೆ ಬರೋದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ರಾಶಿಕಾ–ಕಾವ್ಯರಿಂದ ಸಾಥ್!
ಗಿಲ್ಲಿ ನಟನ ಮಾತುಗಳಿಗೆ ರಾಶಿಕಾ ಶೆಟ್ಟಿ ಕೂಡ ಬೆಂಬಲ ನೀಡಿದ್ದಾರೆ. “ಅವರಿಗೆ ಕ್ಯಾಪ್ಟನ್ ಆಗೋಕೆ ಆಗಿಲ್ಲ ಸುಮ್ನಿರು. ಕ್ಯಾಪ್ಟನ್ ಆಗದೇ ಇರೋರು ಉಸ್ತುವಾರಿ ಹೇಗೆ ಮಾಡ್ತಾರೆ?” ಎಂದು ರಾಶಿಕಾ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಇದಕ್ಕೆ ಕಾವ್ಯ ಕೂಡ ಸಾಥ್ ನೀಡಿದ್ದು, “ನಿನಗೆ ಕ್ಯಾಪ್ಟನ್ ಆಗೋ ಯೋಗ್ಯತೆಯೇ ಇಲ್ಲ ಅಂತ ಅಖಾಡದಲ್ಲೇ ಸಾಬೀತಾಗಿದೆ. ಏನು ಮಾಡಿದ್ರು ಏನೂ ಆಗಲೇ ಇಲ್ಲ” ಎಂದು ಅಶ್ವಿನಿಗೆ ಟಕ್ಕರ್ ಕೊಟ್ಟಿದ್ದಾರೆ.
ಸಿಡಿದ ಅಶ್ವಿನಿ ಗೌಡ!
ಅಶ್ವಿನಿ ಗೌಡ ತಕ್ಷಣವೇ ಸಿಟ್ಟಿನಿಂದ ಕೌಂಟರ್ ನೀಡಿದ ಅವರು, “ರೂಮ್‌ಗೆ ಹೋಗಿ ಗುಬ್ರಾಕ್ಕೊಂಡು ಮಲ್ಕೊಂಡು ಮಾತಾಡು. ಮೊದಲು ಮದುವೆ ಆಗು. ಮೂಳೆ ಬಿದ್ದೋಗ್ತಿವೆ. ನೀವು ಕ್ಯಾಪ್ಟನ್ ಆಗಿ, ಉಸ್ತುವಾರಿಯಾಗಿ ಏನೇನ್ ದಬಾಕ್ಕಿದ್ದೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಅದಕ್ಕೆ ಉಗಿದಿದ್ದು ನಿಮಗೆ ” ಎಂದು ತಿರುಗೇಟು ನೀಡಿದ್ದಾರೆ.
ಅಶ್ವಿನಿಯ ಈ ಮಾತುಗಳು ಮನೆಯಲ್ಲಿದ್ದವರನ್ನು ಅಚ್ಚರಿಗೊಳಿಸಿದರೆ, ವೀಕ್ಷಕರಲ್ಲಿ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅಶ್ವಿನಿಯ ಧೈರ್ಯವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈ ಜಗಳ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ಆಟ ಈಗ ಅಂತಿಮ ಹಂತಕ್ಕೆ ತಲುಪಿದೆ. ಪ್ರತಿಯೊಬ್ಬರೂ ಟ್ರೋಫಿ ಗೆಲ್ಲಬೇಕೆಂಬ ಆಸೆಯಿಂದ ಆಟ ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಣ್ಣ ವಿಚಾರಗಳಿಗೂ ದೊಡ್ಡ ಜಗಳಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಗಿಲ್ಲಿ ನಟ-ಅಶ್ವಿನಿ ಗೌಡ ನಡುವಿನ ಈ ಕಿತ್ತಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.





