ಬೆಂಗಳೂರು: ಭಾರತೀಯ ಕ್ರಿಕೆಟ್ನ ದಿಗ್ಗಜ ವಿರಾಟ್ ಕೊಹ್ಲಿ ಅವರು ಮತ್ತೊಂದು ಅಪೂರ್ವ ಸಾಧನೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025–26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗುಜರಾತ್ ವಿರುದ್ಧ ಆಡಿದ ಅದ್ಭುತ ಇನಿಂಗ್ಸ್ ಮೂಲಕ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 77 ರನ್ಗಳನ್ನು ಸಿಡಿಸಿ, ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದರು. ಈ ಇನಿಂಗ್ಸ್ ಕೇವಲ ತಂಡದ ಗೆಲುವಿನ ಜೊತೆಗೆ ಕೊಹ್ಲಿಯ ಹೆಸರಿನ ಮುಂದೆ ಮತ್ತೊಂದು ಚಿನ್ನದ ಅಕ್ಷರದ ಸಾಧನೆಯನ್ನು ಸೇರಿಸಿದೆ.
ಮೈಕೆಲ್ ಬೆವನ್ ದಾಖಲೆ ಭಂಗ
ಈ ಇನಿಂಗ್ಸ್ನೊಂದಿಗೆ ವಿರಾಟ್ ಕೊಹ್ಲಿಯ ಲಿಸ್ಟ್ ಎ ಕ್ರಿಕೆಟ್ ವೃತ್ತಿಜೀವನದ ಸರಾಸರಿ 57.87ಕ್ಕೆ ಏರಿದೆ. ಇದರೊಂದಿಗೆ ಅವರು ಆಸ್ಟ್ರೇಲಿಯಾದ ದಂತಕಥೆ ಬ್ಯಾಟ್ಸ್ಮನ್ ಮೈಕೆಲ್ ಬೆವನ್ ಅವರ 57.86ರ ವಿಶ್ವ ದಾಖಲೆಯನ್ನು ಮುರಿದರು. ಲಿಸ್ಟ್ ಎ ಕ್ರಿಕೆಟ್ನಲ್ಲಿ ಉನ್ನತ ಸರಾಸರಿ ಕಾಯ್ದುಕೊಂಡಿರುವ ಬ್ಯಾಟ್ಸ್ಮನ್ ಇತಿಹಾಸದಲ್ಲೇ ವಿರಾಟ್ ಕೊಹ್ಲಿಯೇ ಮೊದಲಿಗರಾಗಿದ್ದಾರೆ.
ಲಿಸ್ಟ್ ಎ ಕ್ರಿಕೆಟ್-ಅಗ್ರ ಸರಾಸರಿ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1
ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಈಗ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರದ ಬ್ಯಾಟ್ಸ್ಮನ್ಗಳು
-
ಮೈಕೆಲ್ ಬೆವನ್ – 57.86
-
ಸ್ಯಾಮ್ ಹೈನ್ – 57.76
-
ಚೇತೇಶ್ವರ ಪೂಜಾರ – 57.01
-
ಋತುರಾಜ್ ಗಾಯಕ್ವಾಡ್ – 56.68
ಪಾಕಿಸ್ತಾನದ ಬಾಬರ್ ಆಝಮ್ (53.82) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (53.46) ಕೂಡ ಈ ಗೌರವಾನ್ವಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕೊನೆಯ 6 ಪಂದ್ಯಗಳಲ್ಲಿ ಅಸಾಧಾರಣ ಫಾರ್ಮ್
ಕೊಹ್ಲಿಯ ಇತ್ತೀಚಿನ ಫಾರ್ಮ್ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿ ಮೂಡಿಸಿದೆ. ಕಳೆದ 6 ಏಕದಿನ ಪಂದ್ಯಗಳಲ್ಲಿ ಅವರು 146.00ರ ಸರಾಸರಿಯಲ್ಲಿ 584 ರನ್ಗಳನ್ನು ಗಳಿಸಿದ್ದಾರೆ.
ಈ ಅವಧಿಯಲ್ಲಿ ಅವರ ಪ್ರಮುಖ ಇನಿಂಗ್ಸ್ಗಳು
-
ಗುಜರಾತ್ ವಿರುದ್ಧ – 77 (61 ಎಸೆತ)
-
ಆಂಧ್ರ ವಿರುದ್ಧ – 131 (101 ಎಸೆತ)
-
ದಕ್ಷಿಣ ಆಫ್ರಿಕಾ ವಿರುದ್ಧ – 65*
-
ದಕ್ಷಿಣ ಆಫ್ರಿಕಾ ವಿರುದ್ಧ – 102
-
ದಕ್ಷಿಣ ಆಫ್ರಿಕಾ ವಿರುದ್ಧ – 135
-
ಆಸ್ಟ್ರೇಲಿಯಾ ವಿರುದ್ಧ – 74
ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ
2025ರಲ್ಲಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ 110ಕ್ಕಿಂತ ಹೆಚ್ಚಾಗಿದೆ. ಇದು ಇಂದಿನ ವೇಗದ ವೈಟ್ ಬಾಲ್ ಕ್ರಿಕೆಟ್ಗೆ ಅವರು ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ವರ್ಷ ಅವರು ಲಿಸ್ಟ್ ಎ ಕ್ರಿಕೆಟ್ನಲ್ಲಿ 16,000 ರನ್ಗಳನ್ನು ಅತ್ಯಂತ ವೇಗವಾಗಿ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದು, ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.





