ದೇಶದ ರಕ್ಷಣೆ ಮಾಡುವ ಯೋಧರ ಶಿಸ್ತು ಮತ್ತು ಭದ್ರತೆಯ ದೃಷ್ಟಿಯಿಂದ ಭಾರತೀಯ ಸೇನೆಯು ತನ್ನ ಸಾಮಾಜಿಕ ಮಾಧ್ಯಮ (Social Media) ಬಳಕೆಯ ನೀತಿಯಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ. ದಶಕಗಳಿಂದಲೂ ಯೋಧರು ಸಾರ್ವಜನಿಕವಾಗಿ ಸೋಶಿಯಲ್ ಮೀಡಿಯಾ ಬಳಸುವುದರ ಮೇಲೆ ಕಟ್ಟುನಿಟ್ಟಿನ ನಿಷೇಧವಿತ್ತು. ಈಗ ಆ ನಿಯಮದಲ್ಲಿ ಸಣ್ಣ ಸಡಿಲಿಕೆ ಮಾಡಲಾಗಿದ್ದು, ಜ್ಞಾನಾರ್ಜನೆಯ ಉದ್ದೇಶಕ್ಕಾಗಿ ಕೆಲವು ಸಾಮಾಜಿಕ ಜಾಲತಾಣಗಳನ್ನು ಬಳಸಲು ಅನುಮತಿ ನೀಡಲಾಗಿದೆ.
ಹೊಸ ನಿಯಮ ಏನು ಹೇಳುತ್ತದೆ ?
ಭಾರತೀಯ ಸೇನೆಯ ಇತ್ತೀಚಿನ ಆದೇಶದಲ್ಲಿ ತಿಳಿಸಿದಂತೆ, ಯೋಧರು ಇನ್ನು ಮುಂದೆ ಇನ್ಸ್ಟಾಗ್ರಾಮ್ (Instagram) ಮತ್ತು ಎಕ್ಸ್ (X – ಹಿಂದೆ ಟ್ವಿಟರ್) ತಾಣಗಳನ್ನು ಬಳಸಬಹುದು. ಆದರೆ, ಈ ಬಳಕೆ ಕೇವಲ ಮಾಹಿತಿ ಪಡೆಯಲು ಅಥವಾ ವಿಡಿಯೋ/ಪೋಸ್ಟ್ಗಳನ್ನು ನೋಡಲು ಮಾತ್ರ ಸೀಮಿತವಾಗಿರುತ್ತದೆ. ಯೋಧರು ಯಾವುದೇ ಪೋಸ್ಟ್ಗಳನ್ನು ಹಾಕುವಂತಿಲ್ಲ, ಯಾವುದೇ ವಿಚಾರಕ್ಕೆ ಪ್ರತಿಕ್ರಿಯೆ (Comment) ನೀಡುವಂತಿಲ್ಲ ಅಥವಾ ಲೈಕ್ ಮಾಡುವಂತಿಲ್ಲ. ಕೇವಲ ಆ ಪೋಸ್ಟ್ಗಳನ್ನ ವೀಕ್ಷಿಸಬಹುದು ಬಹುದು ಎಂದು ತಿಳಿಸಿದೆ.
ಶತ್ರು ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳು ಸುಂದರ ಯುವತಿಯರ ಹೆಸರಿನಲ್ಲಿ ಫೇಕ್ ಪ್ರೊಫೈಲ್ ಸೃಷ್ಟಿಸಿ ಯೋಧರನ್ನು ಸ್ನೇಹದ ಜಾಲಕ್ಕೆ ಬೀಳಿಸುತ್ತವೆ. ಈ ಮೂಲಕ ಸೇನೆಯ ರಹಸ್ಯ ಮಾಹಿತಿಗಳನ್ನು ಕದಿಯುವ ಅಪಾಯವಿರುತ್ತದೆ. ತಿಳಿಯದೆಯೇ ಯೋಧರು ತಮ್ಮ ಸ್ಥಳ (Location) ಅಥವಾ ಸೇನಾ ನೆಲೆಯ ಫೋಟೋಗಳನ್ನು ಹಂಚಿಕೊಂಡಾಗ, ಅದು ದೇಶದ ಭದ್ರತೆಗೆ ದೊಡ್ಡ ಸಂಚಕಾರ ತರಬಲ್ಲದು ಎಂಬ ಎರಡು ಕಾರಣಗಳು ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ.
ಫೇಸ್ಬುಕ್ ಸೇರಿದಂತೆ ಚೀನಾ ಮೂಲದ ಆಪ್ಗಳು ಮತ್ತು ಇತರ ಮೆಸೇಜಿಂಗ್ ಆಪ್ಗಳ ಮೇಲಿನ ಸಂಪೂರ್ಣ ನಿಷೇಧ ಹಾಗೆಯೇ ಮುಂದುವರಿಯಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಸ್ಮಾರ್ಟ್ಫೋನ್ ಬಳಕೆಯ ಮೇಲೂ ಮಿತಿ ಹೇರಲಾಗಿದೆ. ಈ ಹೊಸ ಬದಲಾವಣೆಯು ಕೇವಲ ಯೋಧರು ಜಾಗತಿಕ ವಿದ್ಯಮಾನಗಳನ್ನು ತಿಳಿದುಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಿದೆ.
ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ಎಲ್ಲರಿಗೂ ಅಗತ್ಯ. ಆದರೆ ದೇಶದ ಭದ್ರತೆಯ ವಿಷಯ ಬಂದಾಗ ಶಿಸ್ತು ಅತಿ ಮುಖ್ಯ. ಭಾರತೀಯ ಸೇನೆಯ ಈ ಸಮತೋಲಿತ ನಿರ್ಧಾರವು ಯೋಧರಿಗೆ ಬಾಹ್ಯ ಪ್ರಪಂಚದ ಅರಿವು ಮೂಡಿಸುವ ಜೊತೆಗೆ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.





