ಆನ್ಲೈನ್ ಡೇಟಿಂಗ್ ಆ್ಯಪ್ಗಳ ಮೂಲಕ ನಡೆಯುವ ವಂಚನೆಗಳನ್ನು (ರೊಮ್ಯಾನ್ಸ್ ಸ್ಕ್ಯಾಮ್) ತಡೆಗಟ್ಟಲು ಕೇಂದ್ರ ಗೃಹ ಸಚಿವಾಲಯದ ಅಡಿ ಬರುವ ‘ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರ’ (I4C) ಹಾಗೂ ಪ್ರಮುಖ ಡೇಟಿಂಗ್ ಆ್ಯಪ್ಗಳ ಮಾತೃಸಂಸ್ಥೆಯಾದ ‘ಮ್ಯಾಚ್ ಗ್ರೂಪ್’ ಜಂಟಿ ಅಭಿಯಾನವನ್ನು ಆರಂಭಿಸಿವೆ.
ನವದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ‘ಟ್ರಸ್ಟ್ ಅಂಡ್ ಸೇಫ್ಟಿ ಫೆಸ್ಟಿವಲ್’ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ. ಟಿಂಡರ್, ಹಿಂಜ್ ಮತ್ತು ದ ಲೀಗ್ನಂತಹ ಜನಪ್ರಿಯ ಆ್ಯಪ್ಗಳನ್ನು ಮುನ್ನಡೆಸುತ್ತಿರುವ ಮ್ಯಾಚ್ ಗ್ರೂಪ್, ಈ ಒಪ್ಪಂದದ ಮೂಲಕ ಆನ್ಲೈನ್ ವಂಚಕರ ತಂತ್ರಗಳನ್ನು ಗುರುತಿಸುವುದು ಮತ್ತು ದೂರು ನೀಡುವ ವಿಧಾನಗಳ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲಿದೆ.
ಬಳಕೆದಾರರು ವಹಿಸಬೇಕಾದ ಎಚ್ಚರಿಕೆಗಳೇನು?
ವಂಚಕರು ಸಾಮಾನ್ಯವಾಗಿ ನಂಬಿಕೆ ಗಳಿಸಿದ ನಂತರವೇ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ. ಇದನ್ನು ತಪ್ಪಿಸಲು ಕೆಲವು ಪ್ರಮುಖ ಎಚ್ಚರಿಕೆಗಳನ್ನು ವಹಿಸುವಂತೆ ಈ ಅಭಿಯಾನದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಗಳು ತಕ್ಷಣವೇ ವಾಟ್ಸಾಪ್ ಅಥವಾ ಇತರ ಮೆಸೇಜಿಂಗ್ ಆ್ಯಪ್ಗಳಿಗೆ ಬರಲು ಒತ್ತಾಯಿಸಿದರೆ ಹಾಗೂ ವಿಡಿಯೋ ಕರೆ ಮಾಡಲು ಅಥವಾ ನೇರವಾಗಿ ಭೇಟಿಯಾಗಲು ನಿರಾಕರಿಸಿದರೆ ಎಚ್ಚರವಹಿಸಬೇಕು.
ಎದುರಿಗಿರುವ ವ್ಯಕ್ತಿಯ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಪ್ರೊಫೈಲ್ ವೆರಿಫಿಕೇಶನ್ ನೋಡುವುದು ಹಾಗೂ ವಿಡಿಯೋ ಕರೆ ಮಾಡುವುದು ಸೂಕ್ತ. ಆನ್ಲೈನ್ನಲ್ಲಿ ಪರಿಚಯವಾದ ಹೊಸ ವ್ಯಕ್ತಿಗಳು ಕ್ರಿಪ್ಟೋಕರೆನ್ಸಿ ಅಥವಾ ಹೂಡಿಕೆಯ ಬಗ್ಗೆ ಸಲಹೆ ನೀಡಿದರೆ, ಅಧಿಕ ಲಾಭದ ಆಸೆ ತೋರಿಸಿದರೆ ಅದನ್ನು ಕಡೆಗಣಿಸಬೇಕು.
ಇದರ ಜೊತೆಗೆ, ವೀಸಾ ಶುಲ್ಕ, ವೈದ್ಯಕೀಯ ಖರ್ಚು ಅಥವಾ ಪ್ರಯಾಣದ ನೆಪವೊಡ್ಡಿ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಹಣ ಅಥವಾ ಗಿಫ್ಟ್ ಕಾರ್ಡ್ಗಳನ್ನು ಕಳುಹಿಸಬಾರದು. ವಂಚಕರು ವಾರಗಳು ಅಥವಾ ತಿಂಗಳುಗಳ ಕಾಲ ನಂಬಿಕೆ ಗಳಿಸಿ ನಂತರ ಹಣದ ಬೇಡಿಕೆ ಇಡಬಹುದು. ಹೀಗಾಗಿ ಹೊಸ ಪರಿಚಯವನ್ನು ನಂಬಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕು ಮತ್ತು ಆತುರಪಡಬಾರದು ಎಂದು ಎಚ್ಚರಿಸಲಾಗಿದೆ.
ಆ್ಯಪ್ಗಳಲ್ಲಿ ಹೊಸ ಸುರಕ್ಷತಾ ಫೀಚರ್ಗಳ ಅಳವಡಿಕೆ
ಬಳಕೆದಾರರ ಸುರಕ್ಷತೆಗಾಗಿ ಡೇಟಿಂಗ್ ಆ್ಯಪ್ಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಟಿಂಡರ್ ಆ್ಯಪ್ನಲ್ಲಿ ನಕಲಿ ಖಾತೆಗಳನ್ನು ತಡೆಯಲು ಫೇಸ್ ಚೆಕ್ ಮತ್ತು ಫೋಟೋ ವೆರಿಫಿಕೇಶನ್ ಸೌಲಭ್ಯಗಳಿವೆ. ಆಕ್ಷೇಪಾರ್ಹ ಸಂದೇಶಗಳು ಬಂದಾಗ ಎಚ್ಚರಿಸುವ ಫೀಚರ್ಗಳ ಜೊತೆಗೆ, ಕಿರುಕುಳ ನೀಡುವವರನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡುವ ಆಯ್ಕೆಯೂ ಇದೆ.
ಡೇಟ್ಗೆ ಹೋಗುವಾಗ ಸ್ಥಳದ ಮಾಹಿತಿಯನ್ನು ಆಪ್ತರೊಂದಿಗೆ ಹಂಚಿಕೊಳ್ಳಲು ಶೇರ್ ಮೈ ಡೇಟ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದೇ ರೀತಿ ಹಿಂಜ್ ಆ್ಯಪ್ ಕೂಡ ಬಳಕೆದಾರರ ಸುರಕ್ಷತೆಗಾಗಿ ಸ್ಕ್ರೀನ್ಶಾಟ್ ನಿರ್ಬಂಧ, ನೈಜ ವ್ಯಕ್ತಿಗಳ ಪರಿಶೀಲನೆಗೆ ಫೇಸ್ ಚೆಕ್ ಮತ್ತು ಹೊಸ ಬಳಕೆದಾರರಿಗೆ ವೇಟ್ಲಿಸ್ಟ್ನಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಪರಿಚಯಿಸಿದೆ.
ಇದರೊಂದಿಗೆ ಆನ್ಲೈನ್ ಡೇಟಿಂಗ್ ಕುರಿತು ಅರಿವು ಮೂಡಿಸಲು ಸ್ಥಳೀಯ ಭಾಷೆಗಳಲ್ಲಿ ಸುರಕ್ಷತಾ ಮಾರ್ಗದರ್ಶಿಗಳನ್ನು ಸಹ ರೂಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಫೋರ್ಸಿ (I4C) ನಿರ್ದೇಶಕ ನಿಶಾಂತ್ ಕುಮಾರ್, “ಆನ್ಲೈನ್ನಲ್ಲಿ ನಂಬಿಕೆಯ ಜೊತೆಗೆ ಎಚ್ಚರಿಕೆಯೂ ಇರಬೇಕು,” ಎಂದು ಹೇಳಿದ್ದಾರೆ. ವಂಚಕರು ನಕಲಿ ಖಾತೆಗಳನ್ನು ಸೃಷ್ಟಿಸಿ ಭಾವನೆಗಳೊಂದಿಗೆ ಆಟವಾಡುತ್ತಾರೆ ಮತ್ತು ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಪ್ರೇರೇಪಿಸುತ್ತಾರೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
“ಆನ್ಲೈನ್ ವಂಚನೆಗಳನ್ನು ತಡೆಯಲು ತಂತ್ರಜ್ಞಾನ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಜಾಗತಿಕ ಸಹಕಾರ ಅಗತ್ಯವಾಗಿದೆ. ಕೇಂದ್ರ ಸರ್ಕಾರದ ಜೊತೆಗಿನ ಈ ಒಪ್ಪಂದವು ಭಾರತದಲ್ಲಿ ಸುರಕ್ಷಿತ ಆನ್ಲೈನ್ ಡೇಟಿಂಗ್ ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡಲಿದೆ,” ಎಂದು ಮ್ಯಾಚ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಯೋಯೆಲ್ ರೋತ್ ಅಭಿಪ್ರಾಯಪಟ್ಟಿದ್ದಾರೆ.
ವಂಚನೆಗೊಳಗಾದರೆ ದೂರು ನೀಡುವುದು ಹೇಗೆ?
ಆನ್ಲೈನ್ ಡೇಟಿಂಗ್ ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೊಳಗಾದರೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ನೀಡಬಹುದು. ಅಥವಾ cybercrime.gov.in ಪೋರ್ಟಲ್ನಲ್ಲಿ ದೂರು ದಾಖಲಿಸಬಹುದು.
ಸೈಬರ್ ಸುರಕ್ಷತೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಇನ್ಸ್ಟಾಗ್ರಾಮ್ನಲ್ಲಿ ಕೇಂದ್ರ ಸರ್ಕಾರದ ಅಧಿಕೃತ @CyberDostI4C ಖಾತೆಯನ್ನು ಫಾಲೋ ಮಾಡಬಹುದಾಗಿದೆ.





