ಉಡುಪಿ, ನವೆಂಬರ್ 28: ಕರ್ನಾಟಕದ ಪುಣ್ಯಕ್ಷೇತ್ರ ಉಡುಪಿ ಶ್ರೀ ಕೃಷ್ಣ ಮಠ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ಕಂಗೊಳಿಸುತ್ತಿದೆ. ಬೆಳಗ್ಗೆ 11:05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿಯನ್ನು ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಇತರರು ಆರತಿ ಬೆಳಗಿ ಸ್ವಾಗತಿಸಿದರು.
ತಕ್ಷಣವೇ ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ತೆರಳಿದ ಪ್ರಧಾನಿ 11:30ಕ್ಕೆ ರಾಜಾಂಗಣ ಹೈದಾನದ ಹೆಲಿಪ್ಯಾಡ್‌ಗೆ ಬಂದಿಳಿದರು. ಅಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಬಿಜೆಪಿ ಹಿರಿಯ ನಾಯಕರಿಂದ ಭರ್ಜರಿ ಸ್ವಾಗತ ದೊರೆತಿದೆ.
ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಭವ್ಯ ರೋಡ್ ಶೋ ಆರಂಭಿಸಿದರು. ಬನ್ನಂಜೆ ನಾರಾಯಣ ಗುರು ವೃತ್ತದಿಂದ ಕಲ್ಸಂಕ ಜಂಕ್ಷನ್ ವರೆಗೆ ಸುಮಾರು 4 ಕಿ.ಮೀ. ದೂರದ ಮಾರ್ಗದಲ್ಲಿ ನಡೆಯುತ್ತಿರುವ ಈ ರೋಡ್ ಶೋಗೆ ಲಕ್ಷಾಂತರ ಜನರ ಸಾಗರ ಹರಿದು ಬಂದಿದೆ. ರಥಬೀದಿಯ ಐತಿಹಾಸಿಕ ಮಾರ್ಗದಲ್ಲಿ ಮೋದಿ ವಾಹನ ಸಾಗುತ್ತಿರುವ ದೃಶ್ಯ ಅಪೂರ್ವವಾಗಿದೆ. ಜನರು ಪುಷ್ಪವೃಷ್ಟಿ ಮಾಡುತ್ತಾ ಮೋದಿ… ಮೋದಿ…, “ಜೈ ಶ್ರೀ ಕೃಷ್ಣ” ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರಧಾನಿ ಎಲ್ಲರತ್ತ ಕೈಬೀಸಿ, ನಗುನಗುತ್ತಾ ಸ್ಪಂದಿಸುತ್ತಿದ್ದಾರೆ.
ಶ್ರೀ ಕೃಷ್ಣ ಮಠದಲ್ಲಿ ಪ್ರಧಾನಿಯವರ ಕಾರ್ಯಕ್ರಮಗಳು
ರೋಡ್ ಶೋ ಬಳಿಕ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ. ಅಲ್ಲಿ 2 ಕೋಟಿ ವೆಚ್ಚದ ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟನೆ ಮಡಲಿದ್ದಾರೆ. ನಂತರ ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ ಮಾಡಿ, ಸ್ವರ್ಣ ಖಚಿತ ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣ ದೇವರ ದರ್ಶನ ಪಡಿಯುತ್ತಾರೆ. ಬಳಿಕ ಅಷ್ಟ ಮಠಾಧೀಶರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಗೀತಾ ಮಂದಿರಕ್ಕೆ ಭೇಟಿ ನೀಡಿ, ನೂತನ ಅನಂತಪದ್ಮನಾಭ ಮೂರ್ತಿ ಅನಾವರಣಗೊಳಿಸಲಿದ್ದಾರೆ. ಇದಾದ ಬಳಿಕ ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಿ, ತುಳುನಾಡಿನ ವಿಶೇಷ ತಿಂಡಿಗಳ ಸೇವನೆ ಮಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಐತಿಹಾಸಿಕ “ಲಕ್ಷ ಕಂಠ ಭಗವದ್ಗೀತಾ ಪಾರಾಯಣ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಒಟ್ಟಾಗಿ ಗೀತಾ ಪಠಿಸುತ್ತಿರುವ ಈ ಅದ್ಭುತ ಕ್ಷಣಕ್ಕೆ ಪ್ರಧಾನಿ ಸಾಕ್ಷಿಯಾಗಲಿದ್ದಾರೆ. ವಿಶೇಷವೆಂದರೆ, ಪ್ರಧಾನಿ ಮೋದಿ ನೆಲದ ಮೇಲೆ ಕುಳಿತು ಭಗವದ್ಗೀತೆಯ 15ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು (ಶ್ಲೋಕ 11-20) ಪಠಿಸಲಿದ್ದಾರೆ. ನಂತರ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ಸ್ಮರಣಾರ್ಥ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ದೇಶ-ವಿದೇಶದ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದಾರೆ.





