ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಬೆಂಗಳೂರಿನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಎಸ್.ಎಂ. ಕೃಷ್ಣ ದಶಪಥ ರಸ್ತೆ ಇಂದು (ಶನಿವಾರ) ಸಾರ್ವಜನಿಕರಿಗೆ ಸಮರ್ಪಣೆಯಾಗಲಿದೆ. ಮಾಗಡಿ ರಸ್ತೆ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ, ಪ್ರಸ್ತುತ 60 ನಿಮಿಷಗಳ ಪ್ರಯಾಣದ ಅವಧಿಯನ್ನು ಕೇವಲ 15 ನಿಮಿಷಗಳಿಗೆ ಇಳಿಸುವ ಮೂಲಕ ವಾಹನ ಸವಾರರಿಗೆ ಮಹತ್ತರ ಅನುಕೂಲ ಕಲ್ಪಿಸಲಿದೆ.
ಜಯಂತಿ ಅಂಗವಾಗಿ ಬೆಳಗ್ಗೆ 7 ಗಂಟೆಗೆ ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯಿಂದ ಪುರಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಈ ಪುರಜ್ಯೋತಿಗೆ ಚಾಲನೆ ನೀಡಲಿದ್ದು, ನಗರದ ವಿವಿಧ ಐತಿಹಾಸಿಕ ಗಡಿಗೋಪುರಗಳು ಹಾಗೂ ಪ್ರಮುಖ ಸ್ಥಳಗಳಿಂದ ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪುರಜ್ಯೋತಿಯನ್ನು ಮುಂದುವರಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಎಸ್.ಎಂ. ಕೃಷ್ಣ ದಶಪಥ ರಸ್ತೆಯಲ್ಲಿ ಪುರಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ನೂತನ ರಸ್ತೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಜಿಬಿಎ, ಬಿಡಿಎ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕೆಂಪೇಗೌಡರ 517ನೇ ಜಯಂತಿ ಸಮಾರಂಭ ಇದೇ ರಸ್ತೆಯಲ್ಲಿ ನಡೆಯಲಿದೆ.
631 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಸ್.ಎಂ. ಕೃಷ್ಣ ದಶಪಥ ರಸ್ತೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ ಒಂಬತ್ತು ಬ್ಲಾಕ್‌ಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಯಲ್ಲಿ ಮೂರು ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ಆಧುನಿಕ ಸರ್ವಿಸ್ ರಸ್ತೆ ಹಾಗೂ ಸೈಕಲ್ ಟ್ರ್ಯಾಕ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗಿದೆ.
ಈ ರಸ್ತೆ ಕಂಬೀಪುರ, ಕೊಮ್ಮಘಟ್ಟ, ಕೆಂಚನಪುರ, ಮಾಚೋಹಳ್ಳಿ, ಕೊಡಿಗೆಹಳ್ಳಿ, ಕನ್ನಳ್ಳಿ, ಸೂಲಿಕೆರೆ ಹಾಗೂ ಚಲ್ಲಘಟ್ಟ ಸೇರಿದಂತೆ ಹಲವು ಗ್ರಾಮಗಳಿಗೆ ಸುಗಮ ಸಂಪರ್ಕ ಒದಗಿಸಲಿದೆ. ಜೊತೆಗೆ ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವ ಸಾವಿರಾರು ಪ್ರಯಾಣಿಕರಿಗೆ ಸಮಯ ಮತ್ತು ಇಂಧನ ಉಳಿತಾಯವಾಗಲಿದ್ದು, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಪ್ರಮುಖ ಪರ್ಯಾಯ ಮಾರ್ಗವಾಗಲಿದೆ.





