ರಾಮನಗರ: ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಗೆ ಕಳಂಕ ತಂದಿರುವ ಘಟನೆಯೊಂದು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 112 ತುರ್ತು ಸೇವೆಗೆ ರಕ್ಷಣೆ ಕೋರಿ ಕರೆ ಮಾಡಿದ್ದ ಮಹಿಳೆಯ ಮೇಲೆ ಡಿಎಆರ್ ಪೊಲೀಸ್ ಪೇದೆ ಪುಟ್ಟಸ್ವಾಮಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯ ಬೆನ್ನಲ್ಲೇ ಆರೋಪಿ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಅವನು ತಲೆಮರೆಸಿಕೊಂಡಿದ್ದಾನೆ.
ಎಂ.ಕೆ. ದೊಡ್ಡಿ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ತಮ್ಮ ಊರಿನಲ್ಲಿ ಗಲಾಟೆಯಾಗುತ್ತಿದೆ ಎಂದು 112 ತುರ್ತು ಸೇವೆಗೆ ಕರೆ ಮಾಡಿದ್ದರು. ಈ ಕರೆಗೆ ಸ್ಪಂದಿಸಿದ 112 ವಾಹನದ ಚಾಲಕ, ಡಿಎಆರ್ ಪೊಲೀಸ್ ಪೇದೆ ಪುಟ್ಟಸ್ವಾಮಿ, ಮಹಿಳೆಯ ಫೋನ್ ಸಂಖ್ಯೆಯನ್ನು ಪಡೆದು ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ನಂತರ, ಆಕೆಯ ಮನೆಯಲ್ಲಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದಷ್ಟೇ ಅಲ್ಲ, ಆಕೆಯಿಂದ 12 ಲಕ್ಷ ರೂಪಾಯಿ ಹಣವನ್ನು ಕೂಡ ಪಡೆದುಕೊಂಡಿದ್ದಾನೆ.
ಕಾಲಕ್ರಮೇಣ, ಪುಟ್ಟಸ್ವಾಮಿ ಮಹಿಳೆಯನ್ನು ಕಡೆಗಣಿಸಲು ಆರಂಭಿಸಿದ್ದಾನೆ. ಆಕೆ ತನ್ನ ಬಂಗಾರವನ್ನು ಅಡವಿಟ್ಟು ಕೊಟ್ಟ ಹಣವನ್ನು ವಾಪಸ್ ಕೇಳಿದಾಗ, ಆತ ದರ್ಪ ತೋರಿದ್ದಾನೆ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊನೆಗೆ, ವಿಧಿಯಿಲ್ಲದೆ ಆಕೆ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಾದ ತಕ್ಷಣ ಪುಟ್ಟಸ್ವಾಮಿ ತನ್ನ ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.
ಬೆಂಗಳೂರು ದಕ್ಷಿಣ (ರಾಮನಗರ) ಎಸ್‌ಪಿ ಶ್ರೀನಿವಾಸ್ ಗೌಡ ಅವರು ಆರೋಪಿ ಪೇದೆಯನ್ನು ಅಮಾನತುಗೊಳಿಸಿದ್ದಾರೆ. ಈ ಪ್ರಕರಣವನ್ನು ಡಿಎಸ್‌ಆರ್‌ಇ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಘಟನೆಯು ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.