ರಾಯಚೂರು\ ಯಾದಗಿರಿ: ರಾಯಚೂರಿನ ಗುರ್ಜಾಪುರ ಬ್ರಿಡ್ಜ್‌ನ ಕೃಷ್ಣಾ ನದಿ ಸೇತುವೆಯಿಂದ ತನ್ನನ್ನು ಪತ್ನಿ ಗದ್ದೆಮ್ಮ ತಳ್ಳಿದ್ದಾಳೆ ಎಂದು ಆರೋಪಿಸಿದ್ದ ಪತಿ ತಾತಪ್ಪನಿಗೆ ಹೊಸ ಸಂಕಷ್ಟ ಎದುರಾಗಿದೆ. ಸೇತುವೆಯಿಂದ ತಳ್ಲಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೆಲವರು ಗದ್ದೆಮ್ಮನ ಪರವಾಗಿ, ಮತ್ತೆ ಕೆಲವರು ತಾತಪ್ಪನ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈಗ ತಾತಪ್ಪನ ವಿರುದ್ಧ ಬಾಲ್ಯವಿವಾಹ ಆರೋಪ ಕೇಳಿ ಬಂದಿದ್ದು, ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಆರೋಪದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಹೌದು, ತಾತಪ್ಪ ತನ್ನ ಪತ್ನಿ ಗದ್ದೆಮ್ಮಳಿಗೆ ವಿಚ್ಛೇದನ ನೀಡಲು ಮುಂದಾಗಿದ್ದು, ಗದ್ದೆಮ್ಮ ಕೃಷ್ಣಾ ನದಿಗೆ ತನ್ನನ್ನು ತಳ್ಳಿ ಕೊಲೆಗೆ ಯತ್ನಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ಆದರೆ, ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿಗಳ ತಂಡವು ಗದ್ದೆಮ್ಮ 15 ವರ್ಷ 8 ತಿಂಗಳ ಅಪ್ರಾಪ್ತ ಬಾಲಕಿಯೆಂದು ಶಾಲಾ ದಾಖಲಾತಿಗಳ ಆಧಾರದಲ್ಲಿ ದೃಢಪಡಿಸಿದೆ. ಈ ಸಂಬಂಧ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಯಾದಗಿರಿ ತಂಡವು ಪತ್ರ ಬರೆದಿದ್ದು, ತಾತಪ್ಪನ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ.
ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡವು ತಾತಪ್ಪನ ಮನೆಗೆ ಭೇಟಿ ನೀಡಿ, ದೇವಸುಗೂರು ಗ್ರಾಮದಲ್ಲಿ ಪರಿಶೀಲನೆ ನಡೆಸಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಸಿಡಿಪಿಒ, ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ತಾತಪ್ಪನ ಕುಟುಂಬದಿಂದ ಮಾಹಿತಿ ಸಂಗ್ರಹಿಸಿದರು. ಆದರೆ, ತಾತಪ್ಪ ಗದ್ದೆಮ್ಮಳ ವಯಸ್ಸಿನ ಯಾವುದೇ ದಾಖಲಾತಿಗಳನ್ನು ಒದಗಿಸದೆ, ಕೇವಲ ಮೌಖಿಕ ಮಾಹಿತಿ ನೀಡಿದ್ದಾನೆ.
ಗದ್ದೆಮ್ಮಳ ಅಧಿಕೃತ ದಾಖಲಾತಿಗಳನ್ನು ಸಲ್ಲಿಸಲು ತಾತಪ್ಪನಿಗೆ ಜುಲೈ 21ರ ಒಳಗೆ ಗಡುವು ನೀಡಲಾಗಿದೆ. ತಾತಪ್ಪನ ಕುಟುಂಬವು ದಾಖಲೆಗಳನ್ನು ಒದಗಿಸಲು ಎರಡು ದಿನಗಳ ಕಾಲಾವಕಾಶ ಕೇಳಿದೆ. ಒಂದು ವೇಳೆ ದಾಖಲೆಗಳನ್ನು ಸಲ್ಲಿಸದಿದ್ದರೆ, ತಾತಪ್ಪ ಮತ್ತು ಅವನ ಕುಟುಂಬದ ವಿರುದ್ಧ ಬಾಲ್ಯವಿವಾಹ ಕಾಯ್ದೆಯಡಿ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಈ ಘಟನೆಯು ರಾಯಚೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.