ಪ್ರತೀ ವರ್ಷದಂತೆ ಈ ವರ್ಷವೂ ಎಲ್ಲೆಡೆ ದಸರಾ ವೈಭವ ಜೋರಿದೆ. ನವ ದುರ್ಗೆಯರಿಗೆ ಪೂಜೆ, ಪುನಸ್ಕಾರಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ಸುಸಂದರ್ಭದಲ್ಲಿ ಶಂಕರಾಚಾರ್ಯರ ಹಿಂದೆ ಬಂದಂತಹ ತಾಯಿ ಮೂಕಾಂಬಿಕೆ ಕೊಲ್ಲೂರಿನಲ್ಲಿ ನೆಲೆಸಿದ ಪರಿಕಲ್ಪನೆಯಲ್ಲಿ ಗೆಜ್ಜೆ ಅನ್ನೋ ಅದ್ಭುತ ಆಲ್ಬಮ್ ಸಾಂಗ್ ಲಾಂಚ್ ಆಗಿದೆ. ಇದರ ಫುಲ್ ಡಿಟೇಲ್ಸ್ ಇಲ್ಲಿದೆ..
- ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್
- ಇದು ಶಂಕರಾಚಾರ್ಯರ ಹಿಂದೆ ಬಂದ ಮೂಕಾಂಬಿಕೆ ಕಥೆ
- ಅಂಕಿತಾ ಅಮರ್-ಭರತ್ ಗುಪ್ತಾಗೆ ಮಯೂರ ಡೈರೆಕ್ಷನ್
- ಸುಧಾರಾಣಿಯಿಂದ ಲಾಂಚ್.. ಎಲ್ಲೆಡೆ ದಸರಾ ಧಮಾಕ..!
ನವರಾತ್ರಿ ಮೊದಲ ದಿನದ ಹಿನ್ನೆಲೆ ನಿನ್ನೆ ಭಕ್ತಿ ಪ್ರಧಾನ ಗೆಜ್ಜೆ ಅನ್ನೋ ಆಲ್ಬಮ್ ಸಾಂಗ್ ಲಾಂಚ್ ಆಗಿದೆ. ಹಿರಿಯನಟಿ ಸುಧಾರಾಣಿ ಈ ಹಾಡನ್ನ ಲಾಂಚ್ ಮಾಡಿ, ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಯೆಸ್.. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯು ಶಂಕರಾಚಾರ್ಯರ ಹಿಂದೆ ಬಂದು ಕೊಲ್ಲೂರಿನಲ್ಲಿ ನೆಲಿಸಿದ್ದಾರೆ ಅನ್ನೋ ಪ್ರತೀತಿ ಇದೆ. ಅದೇ ವಿಷವನ್ನಿಟ್ಟುಕೊಂಡು ಈ ಭಕ್ತಿ ಪ್ರಧಾನ ಗೀತೆ ನವರಾತ್ರಿಯ ಮೊದಲ ದಿನ ಹೊಂಬಾಳೆ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಹಾಡನ್ನು ನೋಡುವಾಗ ಮೈ ರೋಮಾಂಚನ ಆಯ್ತು. ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ. ಮುಂದೆಯೂ ನಿರ್ದೇಶಕ ಮಯೂರ ರಾಘವೇಂದ್ರ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಲಿ ಅಂತ ಸುಧಾರಾಣಿ ತುಂಬು ಹೃದಯದಿಂದ ಹಾರೈಸಿದರು. ಸಿಹಿಕಹಿ ಚಂದ್ರು ಕೂಡ ಹಾಡನ್ನ ಹಾಗೂ ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಅಂದಹಾಗೆ ಈ ಗೆಜ್ಜೆ ಹಾಡನ್ನ ನಿರ್ದೇಶಕ ಮಯೂರ ರಾಘವೇಂದ್ರ ನಿರ್ದೇಶಿಸಿದ್ದು, ಇದಕ್ಕಾಗಿ ಹತ್ತು ತಿಂಗಳ ಶ್ರಮ ಹಾಕಿದ್ದಾರಂತೆ. ಈ ಗೆಜ್ಜೆ ಗೀತೆ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಯಲ್ಲಿ ಮೂಡಿಬಂದಿದೆ. 25 ವರ್ಷದಿಂದ ನಾನು ಕೊಲ್ಲೂರು ಮೂಕಾಂಬಿಕಾ ದೇವಿ ಭಕ್ತ. ಪ್ರತಿ ವರ್ಷ 3-4 ಬಾರಿ ಮೂಕಾಂಬಿಕಾ ದೇವಾಲಯಕ್ಕೆ ಹೋಗುತ್ತೇನೆ. ಅಲ್ಲಿಗೆ ಹೋದಾಗೆಲ್ಲ ಶಂಕರಾಚಾರ್ಯ ಹಾಗೂ ತಾಯಿ ಮೂಕಾಂಬಿಕೆಯ ಬಗ್ಗೆ ಏನಾದರೂ ಮಾಡಬೇಕು ಅನಿಸುತ್ತಿತ್ತು. ಹತ್ತು ತಿಂಗಳ ಹಿಂದೆ ದೇವಿ ದರ್ಶನಕ್ಕೆ ಹೋದಾಗ ಈ ಗೀತೆ ಮಾಡಬೇಕೆಂದು ಗುರುಗಳ ಹಾಗೂ ದೇವಿಯ ಪ್ರೇರಣೆಯಾಯಿತು. ದೇವರ ದರ್ಶನ ಮುಗಿಸಿಕೊಂಡು ಆಚೆ ಬಂದಾಗ ಸುನೀಲ್ ಕುಮಾರ್ ರಾಮಚಂದ್ರ ಅವರಿಗೆ ಈ ಕುರಿತು ಹೇಳಿದೆ. ಆಗ ಅವರು ನಾನೇ ಇದನ್ನು ನಿರ್ಮಾಣ ಮಾಡುತ್ತೇನೆ ಎಂದರು ಅಂತ ಡೈರೆಕ್ಟರ್ ಮಯೂರ ತಿಳಿಸಿದರು.
ಶಾಕಾಹಾರಿ ಮ್ಯೂಸಿಕ್ ಡೈರೆಕ್ಟರ್ ಮಯೂರ ಇದಕ್ಕೆ ಸಂಗೀತ ಸಂಯೋಜಿಸಿದ್ದು, ಮತ್ತೋರ್ವ ಮಯೂರ ಇದಕ್ಕೆ ಸಾಹಿತ್ಯ ರಚಿಸಿದ್ದಾರೆ. ಕರಾವಳಿ ಸಿನಿಮಾದ ಛಾಯಾಗ್ರಹಕ ಅಭಿಮನ್ಯು ಸದಾನಂದನ್ ಅಷ್ಟೇ ಸೊಗಸಾಗಿ ಇದನ್ನ ಸೆರೆಹಿಡಿದಿದ್ದಾರೆ. ಅದ್ಭುತವಾದ ವಸ್ತ್ರಾಲಂಕಾರವನ್ನು ಅರ್ಚನಾ ಮಾಡಿದ್ರೆ. ಈ ಹಾಡು ಆಗಲು ಶ್ರೇಯಸ್ ವಸಿಷ್ಠ, ಸಮೀರ ಸಿಂಹ ಹಾಗೂ ಶೋಭನ್ ಸಹಕರಿಸಿದ್ದಾರೆ. ಚೆಲುವೆ ಅಂಕಿತಾ ಅಮರ್ ಇಲ್ಲಿ ದೇವಿ ಪಾತ್ರ ಮಾಡಿದ್ದು, ಚಂಡಿಗಡದ ಭರತ್ ಗುಪ್ತಾ ಶಂಕರಾಚಾರ್ಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಒಟ್ಟಾರೆ ನವರಾತ್ರಿ ದಸರಾ ಹಿನ್ನೆಲೆ ನವ ದುರ್ಗಿಯರಿಗೆ ವಿಶೇಷ ಪೂಜೆ ಸಲ್ಲಿಸೋ ಈ ಶುಭ ಸಂದರ್ಭದಲ್ಲಿ ಶಕ್ತಿಪೀಠ ಕೊಲ್ಲೂರು ಮೂಕಾಂಬಿಕಾ ದೇವಿಯ ಕುರಿತ ಈ ಗೆಜ್ಜೆ ಗೀತೆ ಹೊರಬಂದಿರೋದು ಪ್ರಸ್ತುತ ಹಾಗೂ ಭಕ್ತಿಪೂರ್ವಕ ಅನಿಸಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





