ಸ್ಯಾಂಡಲ್‌ವುಡ್‌ನ ಭೀಮ.. ಹ್ಯಾಟ್ರಿಕ್ ಡೈರೆಕ್ಟರ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ದುನಿಯಾ ವಿಜಯ್ ಸದ್ಯ ಮೆಜೆಸ್ಟಿಕ್‌ನಲ್ಲಿರೋ ಸೆಕ್ಸ್ ವರ್ಕರ್ಸ್ ಪರ ಧ್ವನಿ ಎತ್ತಿದ್ದಾರೆ. ಸಿಟಿಲೈಟ್ಸ್ ಸಿನಿಮಾದ ಕಥೆಯೂ ಅದೇ ಆಗಿದೆ. ಅಂದಹಾಗೆ ಸಿನಿಮಾ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಸೆಕ್ಸ್ ವರ್ಕರ್ಸ್ ಜೊತೆಗೆ ಕೂಡ ಆ ವಿಡಿಯೋ ಮಾಡಿದ್ಯಾಕೆ ವಿಜಯ್..? ಇಷ್ಟಕ್ಕೂ ಏನು ಹೇಳಿದ್ರು ಅಂತೀರಾ..? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ..
- ಸೆಕ್ಸ್ ವರ್ಕರ್ಸ್ ಪರ ಧ್ವನಿ.. ವಿಜಯ್ ಏನ್ಮಾಡಿದ್ರು ಗೊತ್ತಾ..?
- ಅವರ ಅನ್ನಕ್ಕೆ ಕನ್ನ ಹಾಕಿದವರಿಗೆ ವಿಜಯ್ ಪ್ರೀತಿಯ ಮನವಿ
- ಅವ್ರ ಸಂಪಾದನೆ & ಬದುಕನ್ನ ದಯವಿಟ್ಟು ಹಾಳು ಮಾಡ್ಬೇಡಿ..!
- ನೆಮ್ಮದಿ ಇಲ್ಲದ ವೃತ್ತಿ.. ಆ ಹೆಣ್ಣು ಮಕ್ಕಳ ಮೇಲೆ ಕನಿಕರ ಇರಲಿ
ಸದ್ಯ ದುನಿಯಾ ವಿಜಯ್ ನಿರ್ದೇಶನದ ಸಿಟಿಲೈಟ್ಸ್ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆಯುತ್ತಿದೆ. ಮಗಳು ಮೋನಿಷಾ ಹಾಗೂ ವಿನಯ್ ರಾಜ್‌ಕುಮಾರ್ ಜೋಡಿ ಅಕ್ಷರಶಃ ಮೋಡಿ ಮಾಡ್ತಿದ್ದು, ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಮ್ಯಾಜಿಕ್ ಮಾಡಿದೆ.
ಈ ಬಾರಿ ದುನಿಯಾ ವಿಜಯ್ ಮೆಜೆಸ್ಟಿಕ್‌ನಲ್ಲಿ ನಡೆಯೋ ವೇಶ್ಯಾವಾಟಿಕೆ ಹಾಗೂ ಸೆಕ್ಸ್ ವರ್ಕರ್ಸ್ ಮೇಲೆ ಬೆಳಕು ಚೆಲ್ಲಿದ್ದಾರೆ. ಅವ್ರ ಅಸಹಾಯಕತೆ, ಅವರಿಗೆ ಯಾರೋ ಮಾಡಿದ ಮೋಸ, ಅನಿವಾರ್ಯ ಕಾರಣಗಳು.. ಹೀಗೆ ಎಲ್ಲವನ್ನ ಎಳೆ ಎಳೆಯಾಗಿ ಬಿಚ್ಚಿಡೋ ಕಾರ್ಯ ಮಾಡಿದ್ದಾರೆ. ಅದರಲ್ಲೂ ಸಿಟಿಲೈಟ್ಸ್ ಸಿನಿಮಾ ತೆರೆ ಕಂಡ ಬಳಿಕ ವೀವ್ಸ್‌ಗಾಗಿ ಕೆಲ ಯೂಟ್ಯೂಬರ್‌ಗಳು ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಂಡು ಜೀವನ ಸಾಗಿಸ್ತಿರೋ ಸೆಕ್ಸ್ ವರ್ಕರ್ಸ್‌ನ ಎಕ್ಸ್‌ಪೋಸ್ ಮಾಡಿದ್ದಾರೆ.
ಹೌದು.. ನಿಮ್ಮ ರೇಟ್ ಎಷ್ಟು ಅಂತ ಗಿರಾಕಿ ನೆಪದಲ್ಲಿ ಹೋಗಿ ಸ್ಟಿಂಗ್ ಆಪರೇಷನ್ ಮಾಡಿ, ವೀವ್ಸ್ ಪಡೆದಿದ್ದಾರಂತೆ. ಅದನ್ನ ಕಂಡು ಅದೆಷ್ಟೋ ಮಂದಿ ಸೆಕ್ಸ್ ವರ್ಕರ್ಸ್ ಭಯ ಭೀತರಾಗಿದ್ದಾರೆ. ತಾವು ತಿನ್ನೋ ಅನ್ನಕ್ಕೆ ಮಣ್ಣು ಹಾಕಿಬಿಟ್ರಲ್ವಾ ಅಂತ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಅಂಥವ್ರ ಪರ ನಟ, ನಿರ್ದೇಶಕ, ನಿರ್ಮಾಪಕ ದುನಿಯಾ ವಿಜಯ್ ಧ್ವನಿ ಎತ್ತಿದ್ದಾರೆ. ಗುರುತು ಸಿಗದಂತೆ, ಅವರುಗಳ ಮುಖಕ್ಕೆ ದುಪ್ಪಟ್ಟ ಕಟ್ಟಿಸಿ, ಸ್ವತಃ ತನ್ನೊಟ್ಟಿಗೆ ಕೂರಿಸಿಕೊಂಡು, ಹಾಗೆ ವಿಡಿಯೋ ಮಾಡಿದ ಯೂಟ್ಯೂಬರ್ಸ್‌ಗೆ ಪ್ರೀತಿಯಿಂದ ಒಂದು ಮನವಿ ಮಾಡಿದ್ದಾರೆ ವಿಜಯ್.
ದಯವಿಟ್ಟು ಅವರ ಸಂಪಾದನೆ ಹಾಗೂ ಬದುಕನ್ನ ಹಾಳು ಮಾಡಬೇಡಿ. ಆ ಹೆಣ್ಣು ಮಕ್ಕಳ ಮೇಲೆ ಕನಿಕರ ಇರಲಿ. ಅವರದ್ದು ನೆಮ್ಮದಿ ಇಲ್ಲದ ವೃತ್ತಿ. ಭಯದಲ್ಲೇ ಬದುಕ್ತಾ ಇರ್ತಾರೆ. ದಯವಿಟ್ಟು ವಿಡಿಯೋ ಮಾಡಿರೋ ಯೂಟ್ಯೂಬರ್ಸ್ ಅದನ್ನ ಡಿಲೀಟ್ ಮಾಡಿ. ಸಾಧ್ಯವಾದ್ರೆ ಬಂದು ಅವರಿಗೆ ಕ್ಷಮೆ ಕೇಳಿ.. ಹೀಗಂತ ಅವರ ಮನಮುಟ್ಟುವಂತೆ ಹೇಳಿದ್ದಾರೆ.
ಅಷ್ಟೇ ಅಲ್ಲ.. ಸರ್ಕಾರದಿಂದ ಅವರಿಗೆ ಒಂದಲ್ಲಾ ಒಂದು ದಿನ ಮಾನ್ಯತೆ ಸಿಗಲಿದೆ. ಅಲ್ಲಿಯ ತನಕ ನಾವು ಅವರನ್ನ ಗೌರವಿಸಬೇಕಿದೆ. ಹಾಗಾಗಿ ನನಗೋಸ್ಕರ್ ಡಿಲೀಟ್ ಮಾಡಿ. ನಾನು ಡಿಲೀಟ್ ಮಾಡಿದ್ದೀನಮ್ಮಾ. ನೀವು ಕೂಡ ನನ್ನ ತಾಯಿ, ಅಕ್ಕ, ತಂಗಿ ಇದ್ದಂತೆ ಅಂತ ಹೇಳಿ ಒಬ್ಬರು ಮನವಿ ಮಾಡಿಕೊಂಡ್ರೆ ಸಾಕು. ಆಗ ಎಲ್ಲರೂ ಡಿಲೀಟ್ ಮಾಡ್ತಾರೆ. ಅಲ್ಲದೆ ಅವರದ್ದೇ ಆದ ವೈಯಕ್ತಿಕ ಜೀವನ ಕೂಡ ಇರುತ್ತೆ. ಹಾಗಾಗಿ ಇವೆಲ್ಲರ ಪರ ನಾನು ಕೈ ಮುಗಿದು ಕೇಳಿಕೊಳ್ತೀನಿ ಅಂತ ತಮ್ಮ ದೊಡ್ಡತನ ತೋರಿದ್ದಾರೆ. ಇದಲ್ಲವೇ ಒಬ್ಬ ಸ್ಟಾರ್ ನಟನಿಗೆ ಇರಬೇಕಿರೋ ಬದ್ಧತೆ, ತುಡಿತ, ಪರೋಪಕಾರ ಗುಣ. ಭೇಷ್ ವಿಜಯ್ ಅವರೇ.. ನಿಮ್ಮ ಇಂತಹ ಕಾರ್ಯಗಳು ಅದೆಷ್ಟೋ ಮಂದಿಗೆ ಸ್ಫೂರ್ತಿ ಆಗಲಿವೆ. ನಿಮ್ಮ ಮೇಲೆ ನಿಜಕ್ಕೂ ಗೌರವ ಹೆಚ್ಚುವಂತೆ ಮಾಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





