ರಾಜ್ಯದ ಜನರಿಗೆ ಮತ್ತೆ ಕರೆಂಟ್ ಶಾಕ್ ನೀಡಿರುವ ಕೆಇಆರ್‌ಸಿ (ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ) ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿರುವುದಾಗಿ ಆದೇಶ ಹೊರಡಿಸಿದೆ. ಈ ವಿದ್ಯುತ್ ದರ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
ಈ ನಿರ್ಧಾರದಂತೆ 2025-26 ನೇ ಆರ್ಥಿಕ ವರ್ಷದ ಹೊತ್ತಿಗೆ 36 ಪೈಸೆ, 2026-27 ರಲ್ಲಿ 35 ಪೈಸೆ, ಮತ್ತು 2027-28 ರಲ್ಲಿ 34 ಪೈಸೆ ಹೆಚ್ಚುವರಿಯಾಗಿ ವಿಧಿಸಲಾಗುವುದು. ಈ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಸರಾಸರಿ 8519 ಕೋಟಿ ರೂಪಾಯಿ ವಸೂಲಿ ಮಾಡಲಾಗುವುದು.
ಏಕೆ ದರ ಹೆಚ್ಚಳ?
ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ (ESCOM) ಸಿಬ್ಬಂದಿಗಳ ಪಿಂಚಿಣಿ ಹಾಗೂ ಗ್ರಾಚ್ಯುಟಿ ಪಾವತಿ ಮಾಡಲು ಸರ್ಕಾರ ಈ ದರ ಹೆಚ್ಚಳವನ್ನು ಮಾಡಿದೆ. ಇದರಿಂದಾಗಿ ಈಗಾಗಲೇ 4659 ಕೋಟಿ ರೂಪಾಯಿ ಪಿಂಚಿಣಿ ಮತ್ತು ಗ್ರಾಚ್ಯುಟಿ ಹಿಂಬಾಕಿ ಉಳಿಸಿಕೊಂಡಿರುವ ವಿದ್ಯುತ್ ಸಂಸ್ಥೆಗಳು ತಮ್ಮ ಹಣಕಾಸು ಭಾರ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಗ್ರಾಹಕರ ಮೇಲೆ ಪರಿಣಾಮ
ಈ ದರ ಹೆಚ್ಚಳದಿಂದ ಸಾಮಾನ್ಯ ಜನತೆಗೆ ತೀವ್ರ ಆರ್ಥಿಕ ಭಾರ ಬೀರುವ ಸಾಧ್ಯತೆ ಇದೆ. ಈಗಾಗಲೇ ವಿದ್ಯುತ್ ದರ ಭಾರವನ್ನ ಎದುರಿಸುತ್ತಿರುವ ಜನರಿಗೆ ಇದೊಂದು ಮತ್ತಷ್ಟು ಸಂಕಷ್ಟವನ್ನು ಉಂಟುಮಾಡಲಿದೆ. ಜತೆಗೆ ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು ಹಾಗೂ ಕೃಷಿ ಕ್ಷೇತ್ರದ ಮೇಲೆ ಇದರಿಂದ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ.





