ಬೀದರ್ (ಆಗಸ್ಟ್ 03): ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ. ನಗರದ ಕರೀಮ್ ಕಾಲೋನಿಯಲ್ಲಿ 9 ವರ್ಷದ ಬಾಲಕನ ಮೇಲೆ ಬೀದಿ ನಾಯಿ ಹಠಾತ್ ದಾಳಿ ನಡೆಸಿದ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಯುವಕನ ಸಮಯಪ್ರಜ್ಞೆಯಿಂದ ಬಾಲಕ ದೊಡ್ಡ ಅಪಾಯದಿಂದ ಪಾರಾಗಿದ್ದಾನೆ. ಈ ಭಯಾನಕ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗಾಯಗೊಂಡ ಬಾಲಕನನ್ನು ಮೌಲಾ ಸಾಬ್ (9) ಎಂದು ಗುರುತಿಸಲಾಗಿದೆ. ಬಾಲಕ ರಸ್ತೆ ಮೂಲಕ ತೆರಳುತ್ತಿದ್ದ ವೇಳೆ ಬೀದಿ ನಾಯಿ ಏಕಾಏಕಿ ಅಟ್ಟಾಡಿಸಿಕೊಂಡು ಬಂದು ಕಚ್ಚಿದೆ. ಬಾಲಕನ ಕಿರುಚಾಟ ಕೇಳಿದ ಸ್ಥಳೀಯ ಯುವಕ ತಕ್ಷಣವೇ ಸ್ಥಳಕ್ಕೆ ಧಾವಿಸಿ ನಾಯಿಯನ್ನು ಓಡಿಸಿ ಬಾಲಕನ ಜೀವ ರಕ್ಷಿಸಿದ್ದಾನೆ.
ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ಅಗತ್ಯ ಚಿಕಿತ್ಸೆ ಹಾಗೂ ರೇಬೀಸ್ ತಡೆ ಲಸಿಕೆಯನ್ನು ನೀಡಿರುವ ಮಾಹಿತಿ ಲಭ್ಯವಾಗಿದೆ.
ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ನಗರದಲ್ಲಿ ಬೀದಿ ನಾಯಿಗಳ ಹಾವಳಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಮತ್ತೆ ಬಯಲಿಗೆಳೆದಿದೆ. ಕಳೆದ ಕೆಲವು ತಿಂಗಳುಗಳಿಂದ ಬಸವಕಲ್ಯಾಣದಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರು ಹೊರಗೆ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಬೀದಿ ನಾಯಿಗಳ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ತಕ್ಷಣವೇ ನಾಯಿಗಳ ಸೆರೆಹಿಡಿಯುವ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಗರಸಭೆ ಹಾಗೂ ಸಂಬಂಧಿತ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.





