ಬೆಂಗಳೂರು, ಆಗಸ್ಟ್ 04: ಬೆಂಗಳೂರು ಹೊರವಲಯ ನೆಲಮಂಗಲ (Nelamangala) ಟೋಲ್ ಸಮೀಪ BMTC ಬಸ್‌ಗೆ ಹತ್ತಲು ಪ್ರಯತ್ನಿಸಿದ ಅಸಹಾಯಕ ಭಿಕ್ಷುಕನನ್ನು ಕಂಡಕ್ಟರ್ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ ಅಮಾನವೀಯ ಘಟನೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, BMTC ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಆರೋಪಿತ ಕಂಡಕ್ಟರ್ ಕೃಷ್ಣಮೂರ್ತಿ (Krishnamurthy) ಅವರನ್ನು ಅಮಾನತುಗೊಳಿಸಿದ್ದಾರೆ.
ಏನಿದು ಘಟನೆ?
ನೆಲಮಂಗಲ ಟೋಲ್ ಸಮೀಪ BMTC ಬಸ್ ನಿಲ್ಲಿಸಿದಾಗ, ಬಸ್‌ಗೆ ಹತ್ತಲು ಪ್ರಯತ್ನಿಸುತ್ತಿದ್ದ ಭಿಕ್ಷುಕನನ್ನು ಕಂಡಕ್ಟರ್ ಕಾಲಿನಿಂದ ತಳ್ಳಿ ಕೆಳಗೆ ಬೀಳಿಸಿದ್ದಾನೆ. ಸ್ಥಳದಲ್ಲಿದ್ದ ಬೈಕ್ ಸವಾರನೊಬ್ಬ ತನ್ನ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದು, ವಿಡಿಯೋದಲ್ಲಿ ಕಂಡಕ್ಟರ್ ರಭಸದಿಂದ ಒದ್ದ ಪರಿಣಾಮ ಭಿಕ್ಷುಕ ರಸ್ತೆಗೆ ಬೀಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಭಿಕ್ಷುಕ ಬಿದ್ದರು ಆತನ ಬಗ್ಗೆ ಯಾವುದೇ ಕಾಳಜಿ ವಹಿಸದೆ ಕಂಡಕ್ಟರ್ ಬಸ್‌ಗೆ ಏರಿ ತೆರಳಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಭಿಕ್ಷುಕನನ್ನು ಕೆಳಗೆ ಉರುಳಿಸಿದ ಬಳಿಕ ಕಂಡಕ್ಟರ್ ಬಸ್ ಬಾಗಿಲು ಮುಚ್ಚಿ, ವಾಹನವನ್ನು ಮುಂದಕ್ಕೆ ಚಲಿಸಿದ ದೃಶ್ಯವೂ ವಿಡಿಯೋದಲ್ಲಿದೆ.
ವಿಡಿಯೋ ವೈರಲ್ – ಸಾರ್ವಜನಿಕ ಆಕ್ರೋಶ
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಯಿಂದ ಇಂತಹ ಅಮಾನವೀಯ ವರ್ತನೆ ನಿರೀಕ್ಷಿಸಿರಲಿಲ್ಲ. ಇದು ಅಕ್ಷಮ್ಯ ಅಪರಾಧ” ಎಂದು ಹಲವರು ಕಮೆಂಟ್ ಮಾಡಿದ್ದಾರೆ.
“ಭಿಕ್ಷುಕನಿಗೆ ಬಸ್ ಹತ್ತಲು ಅವಕಾಶ ಮಾಡಿಕೊಡದಿದ್ದರೂ ಪರವಾಗಿಲ್ಲ, ಆದರೆ ಕಾಲಿನಿಂದ ಒದ್ದು ಕೆಳಗೆ ಬೀಳಿಸುವುದು ಮಾನವೀಯತೆಗೆ ಕಳಂಕ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ತಪ್ಪಿತಸ್ಥ ಕಂಡಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ BMTC ಆಗ್ರಹಿಸಿದ್ದಾರೆ.
BMTC ತಕ್ಷಣದ ಕ್ರಮ
ವಿಡಿಯೋ ವೈರಲ್ ಆದ ಕೂಡಲೇ BMTC ಅಧಿಕಾರಿಗಳು ಗಂಭೀರವಾಗಿ ವಿಷಯವನ್ನು ಪರಿಗಣಿಸಿದ್ದಾರೆ. ಘಟನೆಯ ಕುರಿತು ಪ್ರಾಥಮಿಕ ತನಿಖೆ ನಡೆಸಿ, ಆರೋಪಿತ ಕಂಡಕ್ಟರ್ ಕೃಷ್ಣಮೂರ್ತಿಯವರನ್ನು ತಕ್ಷಣ ಅಮಾನತುಗೊಳಿಸಲಾಗಿದೆ. BMTC ವತಿಯಿಂದ ಹೊರಡಿಸಲಾದ ಹೇಳಿಕೆಯಲ್ಲಿ, “ಈ ಘಟನೆಯು ಸಾರ್ವಜನಿಕ ಸಾರಿಗೆ ಸಂಸ್ಥೆಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಪ್ರಕರಣದ ಕುರಿತು ಇಲಾಖಾ ತನಿಖೆ ಮುಂದುವರಿದಿದ್ದು, ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಲಾಗಿದೆ.
ಕಂಡಕ್ಟರ್ ಕೃಷ್ಣಮೂರ್ತಿ ಯಾರು?
BMTC ಯ ಹೆಬ್ಬಾಳ್ ಘಟಕಕ್ಕೆ ಸೇರಿದ ಕಂಡಕ್ಟರ್ ಕೃಷ್ಣಮೂರ್ತಿ ಎಂದು ಗುರುತಿಸಲಾಗಿರುವ ಈ ಸಿಬ್ಬಂದಿ, ಪ್ರಸ್ತುತ ನೆಲಮಂಗಲ ಮಾರ್ಗದಲ್ಲಿ ಬಸ್ ಸೇವೆ ನಿರ್ವಹಿಸುತ್ತಿದ್ದರು. ಇವರ ವಿರುದ್ಧ ಈ ಹಿಂದೆಯೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಗಳು ಇದ್ದವು ಎಂದು ತಿಳಿದುಬಂದಿದೆ. BMTC ಅಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ಈ ಘಟನೆಯಲ್ಲಿ ಕಾಲಿನಿಂದ ಒದ್ದು ಕೆಳಗೆ ಬೀಳಿಸಲಾದ ಭಿಕ್ಷುಕನ ಸ್ಥಿತಿಯ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸ್ಥಳೀಯರು ಆತನಿಗೆ ತೀವ್ರ ಗಾಯವಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.





