ಸ್ಯಾಂಡಲ್‌ವುಡ್ ಅಂಗಳದಲ್ಲಿ ಬಿಡುಗಡೆ ಹೊಸ್ತಿಲಲ್ಲಿದ್ದ ತದ್ವಿರುದ್ಧ ಸಿನಿಮಾಗೆ ನಟಿ ಸುಮನ್ ರಂಗನಾಥ್ ಬಿಗ್ ಶಾಕ್ ಕೊಟ್ಟಿದ್ದಾರಾ..? ಬರೋಬ್ಬರಿ 18 ಲಕ್ಷ ಸಂಭಾವನೆ ಜೇಬಿಗಿಳಿಸಿಕೊಂಡು, ಈಗ ಪ್ರಮೋಷನ್ ವಿಚಾರದಲ್ಲಿ ಜಾರಿಕೊಳ್ತಿದ್ದಾರಾ..? ಫಿಲ್ಮ್ ಚೇಂಬರ್‌ಗೆ ತಲುಪಿದ ಈ ಹೈ-ವೋಲ್ಟೇಜ್ ಜಟಾಪಟಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
- ಸುಮನ್ ರಂಗನಾಥ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು
- ತದ್ವಿರುದ್ಧ ಪ್ರಮೋಷನ್ ವಿವಾದದಲ್ಲಿ ಸಿಲುಕಿದ ನಟಿ ಸುಮನ್
- ಸಂಭಾವನೆ ಪಡೆದರೂ ಪ್ರಚಾರದಿಂದ ದೂರ ಯಾಕೆ..?
- ಸೋಮವಾರ ಫಿಲ್ಮ್ ಚೇಂಬರ್‌ನಲ್ಲಿ ನಿರ್ಣಾಯಕ ಸಭೆ
ಸಿನಿಮಾ ಮೂಹೂರ್ತದ ದಿನ ಮುಖದಲ್ಲಿ ಹಾಲಿನಂತೆ ನಗೆ ಬೀರೋ ಸ್ಟಾರ್ಸ್, ರಿಲೀಸ್ ಹತ್ತಿರ ಬರ್ತಿದ್ದಂತೆ ನಿರ್ಮಾಪಕರಿಗೆ ಕೈಕೊಡೋದು ಹೊಸದೇನೂ ಅಲ್ಲ. ಈಗ ಅದೇ ಸಾಲಿಗೆ ಬಹುಭಾಷಾ ನಟಿ ಸುಮನ್ ರಂಗನಾಥ್ ಹೆಸರು ಸೇರ್ಪಡೆಯಾಗಿದೆ. ಸುಚೇಂದ್ರ ಪ್ರಸಾದ್ ಹಾಗೂ ಸುಮನ್ ರಂಗನಾಥ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರೋ ‘ತದ್ವಿರುದ್ಧ’ ಸಿನಿಮಾ ಜುಲೈ 31ಕ್ಕೆ ಅದ್ಧೂರಿಯಾಗಿ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. 90ರ ದಶಕದ ಆ ಕಾಲಘಟ್ಟದ ಮರ್ಡರ್ ಮಿಸ್ಟರಿ ಕಥೆ ಹೊತ್ತು ಚಾರ್ಮಿಯಾನ್ ಮೋಷನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ, ವಿನೋದ್ ಜೆ ರಾಜ್ ನಿರ್ದೇಶನದಲ್ಲಿ ಸಿದ್ಧವಾಗಿರೋ ಈ ಒಳ್ಳೆ ಕಂಟೆಂಟ್ ಸಿನಿಮಾಗೆ, ಈಗ ಸ್ವತಃ ತಮ್ಮದೇ ನಟಿಯಿಂದ ಅಡೆತಡೆ ಎದುರಾಗಿದೆ.
ವಿಷಯ ಏನೆಂದರೆ, ಒಪ್ಪಂದದ ಪ್ರಕಾರ ನಟಿ ಸುಮನ್ ರಂಗನಾಥ್ ಅವರಿಗೆ ಬರೋಬ್ಬರಿ 18 ಲಕ್ಷ ಸಂಭಾವನೆಯನ್ನು ಕೊಟ್ಟು, ಸಿನಿಮಾಗೆ ಕರೆತರಲಾಗಿತ್ತು. ಆದರೆ ಸಿನಿಮಾ ರಿಲೀಸ್ ಹೊಸ್ತಿಲಲ್ಲಿದ್ದರೂ ಪ್ರಮೋಷನ್‌ಗೆ ಬರದೆ ನಟಿ ಎಸ್ಕೇಪ್ ಆಗುತ್ತಿದ್ದಾರೆ ಅನ್ನೋದು ಚಿತ್ರತಂಡದ ಸೀರಿಯಸ್ ಆರೋಪ. ಸಿನಿಮಾ ಅಗ್ರಿಮೆಂಟ್ ಪ್ರಕಾರ ಚಿತ್ರ ಬಿಡುಗಡೆಯ ಸಮಯದಲ್ಲಿ ಕನಿಷ್ಠ 10 ದಿನಗಳ ಕಾಲ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂಬ ಸ್ಪಷ್ಟ ನಿಯಮವಿತ್ತು. ಆದರೆ 18 ಲಕ್ಷವನ್ನ ಪೂರ್ತಿಯಾಗಿ ಜೇಬಿಗೆ ಇಳಿಸಿಕೊಂಡ ಮೇಲೆಯೂ ನಟಿ ಸುಮನ್ ರಂಗನಾಥ್ ಮಾತ್ರ ಪ್ರಮೋಷನ್‌ನತ್ತ ಮುಖ ಮಾಡದೆ ನಿರ್ಮಾಪಕರಿಗೆ ಕಾಗೆ ಹಾರಿಸುತ್ತಿದ್ದಾರೆ ಎಂದು ಚಿತ್ರತಂಡ ಆಕ್ರೋಶ ಹೊರಹಾಕಿದೆ.
ಇಷ್ಟು ದಿನ ಚಿತ್ರತಂಡ ಫೋನ್ ಮಾಡಿದರೂ, ಮೆಸೇಜ್ ಮಾಡಿದರೂ ಯಾವುದೇ ರೆಸ್ಪಾನ್ಸ್ ನೀಡದೆ ನಿರ್ಮಾಪಕರನ್ನು ಸತಾಯಿಸುತ್ತಿದ್ದ ನಟಿಯ ಈ ವರ್ತನೆಯಿಂದ ರೋಸಿಹೋದ ಚಿತ್ರತಂಡ ಈಗ ಕಾನೂನು ಸಮರಕ್ಕೆ ನಿಂತಿದೆ. ನಿರ್ಮಾಪಕ ಮುರಳಿ ಅವರ ಆಪ್ತರಾದ ಆಸ್ಕರ್ ಕೃಷ್ಣ, ರಘುಪತಿ ಹಾಗೂ ವಕೀಲ ವಿಜಯ್ ಅವರು ಸೀದಾ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ. ಸುಮನ್ 18 ಲಕ್ಷ ಸಂಭಾವನೆ ಪಡೆದ ಮೇಲೆಯೂ ಪ್ರಚಾರಕ್ಕೆ ಬರದೇ ನಿರ್ಮಾಪಕರನ್ನು ಆಟವಾಡಿಸುತ್ತಿದ್ದಾರೆ, ಅವರ ಮನವೊಲಿಸಿ ಸಿನಿಮಾ ಪ್ರಮೋಷನ್‌ಗೆ ಬರುವಂತೆ ಮಾಡಿ ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಚಿತ್ರತಂಡದ ದೂರು ಆಲಿಸಿದ ಫಿಲ್ಮ್ ಚೇಂಬರ್‌ನ ಉಪಾಧ್ಯಕ್ಷರಾದ ಸುಂದರ್ ರಾಜ್, ಈ ಕೂಡಲೇ ಕಲಾವಿದರ ಸಂಘಕ್ಕೂ ಒಂದು ಅಧಿಕೃತ ಮನವಿ ಪತ್ರ ನೀಡುವಂತೆ ಸೂಚಿಸಿದ್ದಾರೆ. ಯಾವಾಗ ವಿಷಯ ಫಿಲ್ಮ್ ಚೇಂಬರ್ ಮತ್ತು ಕಲಾವಿದರ ಸಂಘದ ಮೆಟ್ಟಿಲೇರಿ ಕಾಂಟ್ರವರ್ಸಿ ಉಲ್ಬಣಿಸಿತೋ ಅಂತ ತಕ್ಷಣವೇ ಎಚ್ಚೆತ್ತುಕೊಂಡ ನಟಿ ಸುಮನ್ ರಂಗನಾಥ್ ಏಕಾಏಕಿ ನಿರ್ಮಾಪಕರಿಗೆ ಮೆಸೇಜ್ ಮಾಡಿ “ನಾನು ಪ್ರಚಾರಕ್ಕೆ ಬರ್ತೀನಿ” ಅಂತ ದಾರಿಗೆ ಬಂದಿದ್ದಾರೆ. ಇಷ್ಟು ದಿನ ಚಿತ್ರತಂಡ ಬೆನ್ನುಬಿದ್ದರೂ ಕ್ಯಾರೇ ಎನ್ನದ ಸುಮನ್, ಕಂಪ್ಲೇಂಟ್ ಆಗ್ತಿದ್ದಂತೆಯೇ ಯೂ-ಟರ್ನ್ ಹೊಡೆದಿದ್ದು ಯಾಕೆ ಅನ್ನೋದು ಸದ್ಯ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ.
ಯಾವುದೇ ಬೆಂಬಲವಿಲ್ಲದೆ ಕೋಟಿ ಕೋಟಿ ಹಣ ಹಾಕಿ ಸಿನಿಮಾ ಮಾಡೋ ಬಡ ನಿರ್ಮಾಪಕರಿಗೆ, ಸ್ಟಾರ್ ನಟಿಯರ ಇಂಥಾ ನಖ್ರಾಗಳಿಂದ ಬಿಸಿ ಮುಟ್ಟುತ್ತಿರೋದು ನಿಜಕ್ಕೂ ಬೇಸರದ ಸಂಗತಿ. ಸದ್ಯ ಸೋಮವಾರದಂದು ಫಿಲ್ಮ್ ಚೇಂಬರ್ ಹಾಗೂ ಪ್ರೊಡ್ಯೂಸರ್ಸ್ ಕೌನ್ಸಿಲ್ ಈ ವಿಚಾರದಲ್ಲಿ ಯಾವ ನಿರ್ಣಾಯಕ ಹಂತಕ್ಕೆ ಬರಲಿವೆ? 18 ಲಕ್ಷ ತಗೊಂಡು ಜಾರಿಕೊಳ್ಳಲು ನೋಡಿದ ಸುಮನ್ ರಂಗನಾಥ್ ಬೆಂಗಳೂರಿಗೆ ಬಂದು ಕೊಡುವ ಸ್ಪಷ್ಟನೆ ಏನು? ಅನ್ನೋದನ್ನು ಕಾದು ನೋಡಬೇಕಿದೆ.





