ಶಾಸಕ ಸಿ.ಪಿ. ಯೋಗೀಶ್ವರ್ ಪುತ್ರ ಧ್ಯಾನ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಧ್ಯಾನ್ ಅಭಿನಯದ ‘ಕರ್ಣಾಟಬಲಂ’ ಹಾಗೂ ‘ಸೈನಿಕ 2’ ಚಿತ್ರಗಳ ಮುಹೂರ್ತ ಪೂಜೆ ಭರ್ಜರಿಯಾಗಿ ನೆರವೇರಿದ್ದು, ಈ ಮೂಲಕ ಯೋಗೀಶ್ವರ್ ಕುಟುಂಬದ ಸಿನಿಮಾ ಕನಸಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ನೀಡುವುದರೊಂದಿಗೆ ತಂಡಕ್ಕೆ ಶುಭ ಹಾರೈಸಿದರು.
ಮುಹೂರ್ತ ಕಾರ್ಯಕ್ರಮದಲ್ಲಿ ‘ಕರ್ಣಾಟಬಲಂ’ ಚಿತ್ರದ ಟೈಟಲ್‌ನ್ನು ಡಿ.ಕೆ. ಶಿವಕುಮಾರ್ ಲಾಂಚ್ ಮಾಡಿದರು. ಇದೇ ವೇಳೆ ‘ಸೈನಿಕ 2’ ಚಿತ್ರದ ಕ್ಯಾಮೆರಾಗೂ ಡಿ.ಕೆ. ಸುರೇಶ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಟಾಲಿವುಡ್ ನಟ ಜಗಪತಿ ಬಾಬು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದು, ಧ್ಯಾನ್‌ಗೆ ಶುಭಾಶಯ ಕೋರಿದರು. ಶಾಸಕ ಸಿ.ಪಿ. ಯೋಗೀಶ್ವರ್ ಮತ್ತೆ ಚಿತ್ರರಂಗದತ್ತ ಮುಖ ಮಾಡಿರುವುದು ಕೂಡ ಕಾರ್ಯಕ್ರಮದ ವಿಶೇಷವಾಗಿತ್ತು.
ಧ್ಯಾನ್ ಅವರ ತಾಯಿ ಶೀಲಾ ಯೋಗೀಶ್ವರ್ ಮಾತನಾಡಿ, “ನನ್ನ ಮಗನಿಗೆ ಈಗ 22 ವರ್ಷ. ಕಳೆದ ಮೂರು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾನೆ. ನಾನು ಥಿಯೇಟರ್ ಓನರ್ ಆಗಿರುವುದರಿಂದ ನಮ್ಮ ಕುಟುಂಬಕ್ಕೆ ಸಿನಿಮಾದ ಮೇಲಿನ ಆಸಕ್ತಿ ಹೆಚ್ಚು. ಗರ್ಭಿಣಿಯಾಗಿದ್ದಾಗಲೂ ನಾನು ಸಿನಿಮಾಗಳನ್ನು ನೋಡುತ್ತಿದ್ದೆ. ಡಾ. ರಾಜ್‌ಕುಮಾರ್ ನನ್ನ ಫೇವರಿಟ್ ಹೀರೋ. ನನ್ನ ಮಗನಿಗೂ ಎಲ್ಲಾ ಸ್ಟಾರ್ಸ್ ಇಷ್ಟ” ಎಂದು ಹೇಳಿದರು.
ತಮಗೂ ಸಿನಿಮಾ ಅವಕಾಶಗಳು ಬಂದಿದ್ದರೂ, ಮಹಿಳಾ ಸಬಲೀಕರಣದ ಕೆಲಸಗಳಲ್ಲಿ ಆಸಕ್ತಿ ಇದ್ದ ಕಾರಣ ಚಿತ್ರರಂಗಕ್ಕೆ ಬರಲಿಲ್ಲ ಎಂದು ಶೀಲಾ ಯೋಗೀಶ್ವರ್ ತಿಳಿಸಿದರು. “ಮಗ ಅಥವಾ ಮಗಳನ್ನು ಇಂಡಸ್ಟ್ರಿಗೆ ಲಾಂಚ್ ಮಾಡಬೇಕು ಎಂಬ ಕನಸು ಇತ್ತು. ಧ್ಯಾನ್ ತುಂಬಾ ಕಷ್ಟಪಟ್ಟು ಸಿನಿಮಾಗೆ ಸಿದ್ಧನಾಗಿದ್ದಾನೆ. ಡಿ.ಕೆ. ಶಿವಕುಮಾರ್ ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೂ ನನ್ನ ಮಗನ ಸಿನಿಮಾಗೆ ಬಂದಿರುವುದು ಸಂತೋಷದ ವಿಚಾರ” ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಯೋಗೀಶ್ವರ್ ಮಗ ನನ್ನ ಮಗನ ಸಮಾನ. ಇತಿಹಾಸವನ್ನು ಯಾರೂ ಮರೆತುಕೊಳ್ಳಲು ಆಗುವುದಿಲ್ಲ. ನಾನು ಕೂಡ ಒಬ್ಬ ಪ್ರದರ್ಶಕನಾಗಿದ್ದೆ. ಸ್ಯಾಂಡಲ್‌ವುಡ್ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ ನಿರ್ಮಾಪಕರಿಗೆ ಇವತ್ತು ರಿಸ್ಕ್ ಹೆಚ್ಚು. ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಬೇಕು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿರುತ್ತದೆ” ಎಂದು ಹೇಳಿದರು.
ಒಟ್ಟಿನಲ್ಲಿ ಧ್ಯಾನ್ ಅವರ ಸ್ಯಾಂಡಲ್‌ವುಡ್ ಪ್ರವೇಶಕ್ಕೆ ಭರ್ಜರಿ ವೇದಿಕೆ ಸಿಕ್ಕಿದ್ದು, ‘ಕರ್ಣಾಟಬಲಂ’ ಹಾಗೂ ‘ಸೈನಿಕ 2’ ಚಿತ್ರಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿವೆ.





