ತುಮಕೂರು: ನಿವೃತ್ತ ಯೋಧರೊಬ್ಬರು (Retired Soldier) ತಮ್ಮ ಹುಟ್ಟುಹಬ್ಬದ (Birthday) ದಿನವೇ ಸೈಬರ್ ವಂಚಕರ ಜಾಲಕ್ಕೆ (Cyber Crime) ಸಿಲುಕಿ ಬರೋಬ್ಬರಿ 2.82 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ತುಮಕೂರಿನಲ್ಲಿ (Tumkur) ನಡೆದಿದೆ.
ಹುಟ್ಟುಹಬ್ಬದಂದೇ ವಂಚನೆಗೆ ಗುರಿ
ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ಅವರಿಗೆ ಜೂನ್ 20ರಂದು ಹುಟ್ಟುಹಬ್ಬವಿತ್ತು. ಮುಂಜಾನೆಯೇ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಾತುಕತೆಯ ನಡುವೆ ತಾವು ಅಮೂಲ್ಯವಾದ ಹುಟ್ಟುಹಬ್ಬದ ಉಡುಗೊರೆ (Gift) ಕಳುಹಿಸಿಕೊಡುವುದಾಗಿ ನಂಬಿಸಿ, ಶಿವಕುಮಾರ್ ಅವರ ಮನೆಯ ವಿಳಾಸವನ್ನು ಪಡೆದುಕೊಂಡಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿದ್ದ ಶಿವಕುಮಾರ್ ಅವರು ಇದು ನಿಜವೆಂದು ಭಾವಿಸಿ ಮೋಸಕ್ಕೆ ಒಳಗಾಗಿದ್ದಾರೆ..
ಶುಲ್ಕದ ಹೆಸರಲ್ಲಿ ಲಕ್ಷಾಂತರ ವಸೂಲಿ
ವಿಳಾಸ ಪಡೆದ ಕೆಲವೇ ಹೊತ್ತಿನಲ್ಲಿ ಮತ್ತೊಮ್ಮೆ ಕರೆ ಮಾಡಿದ ಖದೀಮರು, “ನಿಮ್ಮ ಗಿಫ್ಟ್ ಸಿದ್ಧವಾಗಿದೆ. ಆದರೆ, ಅದನ್ನು ಕಳುಹಿಸಲು ಕೊರಿಯರ್ (Courier) ಮತ್ತು ಕಸ್ಟಮ್ಸ್ ಡ್ಯೂಟಿ (Customs Duty) ಶುಲ್ಕವನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಪಾರ್ಸೆಲ್ ಕೈ ಸೇರಿದ ತಕ್ಷಣ ಈ ಹಣವನ್ನು ಸಂಪೂರ್ಣವಾಗಿ ರಿಫಂಡ್ ಮಾಡಲಾಗುವುದು” ಎಂದು ನಂಬಿಸಿದ್ದಾರೆ. ನಂತರ ಅವರು ಒಂದು ಆನ್ಲೈನ್ ಲಿಂಕ್ ಅನ್ನು ಶಿವಕುಮಾರ್ ಅವರಿಗೆ ಕಳುಹಿಸಿದ್ದಾರೆ.
ಇದು ಸೈಬರ್ ವಂಚಕರು ನಂಬಿಕೆ ಮೂಡಿಸಿದ ನಂತರ ಹಣ ಪಾವತಿಸಲು ಒತ್ತಡ ಹೇರುವುದು ಅವರ ತಂತ್ರವಾಗಿದೆ. ಇದನ್ನು ನಿಜವೆಂದು ನಂಬಿದ ಶಿವಕುಮಾರ್ ಅವರು, ವಿವಿಧ ಶುಲ್ಕಗಳ ಹೆಸರಲ್ಲಿ ಹಂತ ಹಂತವಾಗಿ ಒಟ್ಟು 2.82 ಲಕ್ಷ ರೂಪಾಯಿಯನ್ನು ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ವಂಚಕರ ತಂತ್ರ ಮತ್ತು ತಡವಾದ ಅರಿವು
ಹಣವು ತಮ್ಮ ಖಾತೆಗೆ ಕೈಸೇರಿದ ತಕ್ಷಣವೇ ವಂಚಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮತ್ತೆ ಮತ್ತೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಕಂಡು ಶಿವಕುಮಾರ್ ಅವರಿಗೆ ತಾವು ಸೈಬರ್ ಜಾಲದ ಬಲೆಗೆ ಬಿದ್ದು ವಂಚನೆಗೊಳಗಾಗಿರುವುದು ಅರಿವಾಗಿದೆ.
ಪೊಲೀಸ್ ದೂರು ಮತ್ತು ತನಿಖೆ
ಈ ಸಂಬಂಧ ಅವರು ತುಮಕೂರು CEN (Cyber, Economic and Narcotics) ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ದೂರುದಾರರು ಬ್ಯಾಂಕ್ ಖಾತೆ, ಯುಪಿಐ ID ಮತ್ತು ಕರೆ ಮಾಡಿದ ಮೊಬೈಲ್ ಸಂಖ್ಯೆಗಳ ವಿವರವನ್ನು ಪೊಲೀಸರಿಗೆ ನೀಡಿದ್ದಾರೆ.





