ರಷ್ಯಾ : ಸೈಬೀರಿಯಾದ ರಹಸ್ಯ ಲ್ಯಾಬ್ವೊಂದರಲ್ಲಿ ವಿಜ್ಞಾನಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವುದು ಈಗ ಇಡೀ ಜಗತ್ತಿನ ಕಣ್ಣು ಕೆಂಪಗಾಗಿಸಿದೆ. ರಷ್ಯಾದಲ್ಲಿ ಮತ್ತೆ ಮಹಾಮಾರಿ ಪ್ಲೇಗ್ ಭೀತಿ ಎದ್ದಿದೆಯಾ? ಆಸ್ಪತ್ರೆಗಳು ಯಾಕೆ ತುಂಬಿಕೊಳ್ಳುತ್ತಿವೆ? ಎನ್ನುವ ಆತಂಕದ ಪ್ರಶ್ನೆಗಳು ಮೂಡಿವೆ.
ಮತ್ತೆ ಶುರುವಾಗುತ್ತಾ ಪ್ಲೇಗ್ ಅಬ್ಬರ?
ಒಂದು ಕಾಲದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಪ್ಲೇಗ್ ಮಹಾಮಾರಿ, ಲಕ್ಷಾಂತರ ಜೀವಗಳನ್ನು ಬಲಿ ಪಡೆದಿತ್ತು. ಇತಿಹಾಸದಪುಟ ಸೇರಿದ್ದ ಆ ಮಾರಕ ಕಾಯಿಲೆ ಈಗ ಮತ್ತೆ ರಷ್ಯಾದಲ್ಲಿ ತಲೆ ಎತ್ತಿದೆಯಾ ಎಂಬ ಗುಸುಗುಸು ಶುರುವಾಗಿದೆ. ಈ ಆತಂಕದ ನಡುವೆಯೇ, ರಷ್ಯಾ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ 200ಕ್ಕೂ ಹೆಚ್ಚು ಜನರನ್ನು ಹೋಮ್ ಐಸೋಲೇಶನ್‌ನಲ್ಲಿರುವಂತೆ ಸೂಚಿಸಿದೆ ಎನ್ನಲಾಗುತ್ತಿದ್ದು, ಇದು ಅಲ್ಲಿನ ಜನರ ನಿದ್ದೆಗೆಡಿಸಿದೆ.
ಲ್ಯಾಬ್‌ನಲ್ಲೇ ಸಂಭವಿಸಿದ ದುರಂತವೇ?
ಮೂಲಗಳ ಪ್ರಕಾರ, ಮೃತಪಟ್ಟ 28 ವರ್ಷದ ಯುವತಿ ಇರ್ಕುಟ್ಸ್ಕ್ ಪ್ರದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ಪ್ಲೇಗ್ ಸಂಬಂಧಿತ ಅಧ್ಯಯನದಲ್ಲಿ ತೊಡಗಿದ್ದರು. ಲ್ಯಾಬ್‌ನಲ್ಲಿ ಕೆಲಸ ಮಾಡುವಾಗ ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿ ಅವರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆಕೆಯ ಸಂಪರ್ಕದಲ್ಲಿದ್ದ ಮತ್ತು ಜೊತೆಗೆ ಕೆಲಸ ಮಾಡುತ್ತಿದ್ದ 200ಕ್ಕೂ ಅಧಿಕ ಮಂದಿಯನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.
ಸ್ಥಳೀಯ ಆಸ್ಪತ್ರೆಗಳಲ್ಲಿ ನೂಕುನುಗ್ಗಲು
ಈ ಘಟನೆಯ ಬೆನ್ನಲ್ಲೇ ಸ್ಥಳೀಯ ಆಸ್ಪತ್ರೆಗಳಿಗೆ ಜನ ಮುಗಿಬೀಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಧಿಕೃತವಾಗಿ ಇದು ಪ್ಲೇಗ್ ಮಹಾಮಾರಿ ಎಂದು ಘೋಷಣೆಯಾಗದಿದ್ದರೂ, ಲ್ಯಾಬ್ ದುರ್ಘಟನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಟ್ಟಿನಲ್ಲಿ, ದಶಕಗಳ ಹಿಂದೆ ಮರೆಯಾಗಿದ್ದ ಆ ಭಯಾನಕ ನೆನಪುಗಳು ಮತ್ತೆ ಕಾಡದಿರಲಿ ಎಂಬುದು ಸದ್ಯ ಎಲ್ಲರ ಪ್ರಾರ್ಥನೆ.





