ಬೆಂಗಳೂರು, ಮೇ 28: ಕರ್ನಾಟಕದ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ ಯಲ್ಲಿ ನಡೆದ ಉಪಹಾರ ಸಭೆಯಲ್ಲಿ ಅತ್ಯಂತ ಭಾವನಾತ್ಮಕ ಕ್ಷಣಗಳು ಕಂಡುಬಂದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪ್ಪಿಕೊಂಡು ಪರಸ್ಪರ ಶುಭಾಶಯ ಕೋರುವ ಮೂಲಕ ಪಕ್ಷದಲ್ಲಿ ಒಗ್ಗಟ್ಟಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಸಭೆಯ ಅತ್ಯಂತ ಭಾವನಾತ್ಮಕ ಕ್ಷಣವೆಂದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ನಮಸ್ಕರಿಸಿದ ಘಟನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳು ಗರಿಗೆದರಿರುವ ಈ ಸಂದರ್ಭದಲ್ಲಿ ಇಬ್ಬರು ನಾಯಕರು ತೋರಿದ ಈ ಆತ್ಮೀಯತೆ ಕಾಂಗ್ರೆಸ್‌ನಲ್ಲಿ ಒಳಒಗ್ಗಟ್ಟು ಮುಂದುವರಿದಿದೆ ಎಂಬ ಸಂದೇಶವನ್ನು ನೀಡಿದಂತಾಗಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಉಪಹಾರ ಸಭೆಯಲ್ಲಿ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಸಭೆ ಆರಂಭಕ್ಕೂ ಮೊದಲು ಸಿಎಂ ಮತ್ತು ಡಿಸಿಎಂ ಕೆಲಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ. ಬಳಿಕ ಸಾರ್ವಜನಿಕವಾಗಿ ಇಬ್ಬರೂ ಅಪ್ಪಿಕೊಂಡು ನಗುತ್ತಾ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಹಿನ್ನೆಲೆ ಬ್ರೇಕ್‌ಫಾಸ್ಟ್ ಸಭೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಇಲ್ಲದಿರುವುದು ರಾಜಕೀಯ ಬೆಳವಣಿಗೆಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಸಾಂವಿಧಾನಿಕವಾಗಿ ಮುಖ್ಯಮಂತ್ರಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಸಲ್ಲಿಸುವ ಅವಕಾಶವಿದ್ದರೂ, ರಾಜ್ಯಪಾಲರು ಮರಳಿದ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಉಪರಾಷ್ಟ್ರಪತಿಗಳ ಕಾರ್ಯಕ್ರಮದ ಹಿನ್ನೆಲೆ ರಾಜ್ಯಪಾಲರು ಮುಂಬೈ ಪ್ರವಾಸದಲ್ಲಿದ್ದು, ಇಂದು ಸಂಜೆ ಅಥವಾ ತಡರಾತ್ರಿ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಈ ನಡುವೆ ರಾಜಕೀಯ ಬೆಳವಣಿಗೆಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಲೋಕಭವನದ ಹಿರಿಯ ಅಧಿಕಾರಿಗಳಿಗೆ ತುರ್ತು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಬಕ್ರೀದ್ ಹಬ್ಬದ ರಜೆ ನಡುವೆಯೂ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮುಂದಿನ ನಿರ್ಧಾರ ಏನು ಎಂಬುದರ ಮೇಲೆ ರಾಜ್ಯ ರಾಜಕೀಯದ ಭವಿಷ್ಯ ನಿಂತಿದೆ.




