ಮಾಟ-ಮಂತ್ರ ಮತ್ತು ವಾಮಾಚಾರದ ಹೆಸರಿನಲ್ಲಿ ಯುವತಿಯೊಬ್ಬಳನ್ನು 30 ಲಕ್ಷ ರೂಪಾಯಿ ಆಮಿಷವೊಡ್ಡಿ ಬೆತ್ತಲೆ ಪೂಜೆಗೆ ಒತ್ತಾಯಿಸಿದ ಘಟನೆ ರಾಮನಗರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕಿರಣ್ ಎಂಬಾತನ ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ :
ಕಿರಣ್ ಎಂಬ ವ್ಯಕ್ತಿ ಯುವತಿ ಚೈತ್ರಾ ಅವರಿಗೆ ಫೋನ್ ಮಾಡಿ, “ದೇಹದಲ್ಲಿ ಒಂದೇ ಒಂದು ಮಚ್ಚೆ ಇರಬಾರದು, ಇದ್ದಲ್ಲಿ ಪೂಜೆಗೆ ಕುಳಿತುಕೊಳ್ಳಲು ಆಗುವುದಿಲ್ಲ” ಎಂದು ಹೇಳಿ ಬೆತ್ತಲೆ ಪೂಜೆಗೆ ಒತ್ತಾಯಿಸಿದ್ದಾನೆ ಎಂದು ಆರೋಪವಿದೆ. ಇದರ ಜೊತೆಗೆ ಆಕೆಯ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚೈತ್ರಾ ಅವರು ಏಪ್ರಿಲ್ 12ರಂದು ಈ ಕರೆಗಳನ್ನು ಸ್ವೀಕರಿಸಿದ್ದು, ನಂತರ ಕುಟುಂಬಸ್ಥರೊಂದಿಗೆ ಚರ್ಚಿಸಿ ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಕಿರಣ್ ಪರಾರಿಯಾಗಿದ್ದಾನೆ. ಅವನು ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದೇ ರೀತಿಯ ಮತ್ತೊಂದು ಪ್ರಕರಣ
ಇದೇ ಅವಧಿಯಲ್ಲಿ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಜ್ಯೋತಿಷಿಯೊಬ್ಬರು ಬ್ಯೂಟಿಷಿಯನ್ ಮಹಿಳೆಯ ಮೇಲೆ ಪೂಜೆ-ದೀಕ್ಷೆಯ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರು ಎರಡೂ ಪ್ರಕರಣಗಳಲ್ಲಿ ತೀವ್ರ ತನಿಖೆ ಕೈಗೊಂಡಿದ್ದಾರೆ. ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡುವ ಜಾಲವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.





