ಸಾಮಾಜಿಕ ಜಾಲತಾಣವನ್ನು ಒಮ್ಮೆ ಸ್ಕ್ರೋಲ್ ಮಾಡಿದರೂ ಸಾಕು, ಎಲ್ಲೋ ಒಂದು ಕಡೆ ಟೀ ಗ್ಲಾಸ್ ಹಿಡಿದು ಗಹಗಹಿಸಿ ನಗುತ್ತಿರುವ ಹುಡುಗನ ಮುಖ ಕಾಣದೆ ಹೋಗುವುದೇ ಇಲ್ಲ. ಟ್ರೋಲ್ ವಿಡಿಯೋ ಆಗಿರಲಿ, ಕಾಮಿಡಿ ರೀಲ್ಸ್ ಆಗಿರಲಿ, ಯೂಟ್ಯೂಬ್ ಶಾರ್ಟ್ ಆಗಿರಲಿ ಈ ಹುಡುಗನ ನಗು ಇಲ್ಲದೆ ಆ ವಿಡಿಯೋ ಪೂರ್ಣವಾಗಿದೆ ಅನ್ನಿಸುವುದೇ ಇಲ್ಲ. ಆದರೆ ಈತನನ್ನು ನೋಡಿ ನಗುವ ಲಕ್ಷಾಂತರ ಮಂದಿಗೆ, “ಈ ಹುಡುಗ ಯಾರು?” ಎಂಬ ಪ್ರಶ್ನೆಗೆ ಉತ್ತರ ಗೊತ್ತಿರದು. ಆ ಪ್ರಶ್ನೆಗೆ ಉತ್ತರವೇ ಈ Viral Boy ಅರುಣ್.
ಈ ವೈರಲ್ ಹುಡುಗನ ಹೆಸರು ಅರುಣ್. ಪಕ್ಕದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಳಪಲ್ಲಿ ಜಿಲ್ಲೆಯ ನಾಲಪ್ಪು ಚಟುವಲ್ಲಿ ಎಂಬ ಸಣ್ಣ ಗ್ರಾಮದ ನಿವಾಸಿ. ಬಡ ಕುಟುಂಬದಲ್ಲಿ ಹುಟ್ಟಿದ ಅರುಣ್ ಜೀವನ ಎಂದಿಗೂ ಸುಲಭವಾಗಿರಲಿಲ್ಲ. ನಾಲ್ಕನೇ ತರಗತಿಯವರೆಗೆ ಮಾತ್ರ ಓದಿದ ಈ ಹುಡುಗ, ಬಡತನದ ಕಾರಣದಿಂದಲೇ ಶಾಲೆಯನ್ನು ಮಧ್ಯದಲ್ಲೇ ಬಿಡಬೇಕಾಯಿತು. ಜೀವನ ಸಾಗಿಸಲು ಲಾರಿಯಲ್ಲಿ ಕ್ಲೀನರ್ (ಸಹಾಯಕ) ಆಗಿ ಕೆಲಸ ಆರಂಭಿಸಿದ.
ಅರುಣ್ ಜೀವನದ ದಿಕ್ಕೇ ಬದಲಾಯಿಸಿದ್ದು ಆ ಒಂದು ನಗು. ಲಾರಿ ಚಾಲಕ ನೆಹರು ಅವರ ಜೊತೆಗೆ ಚಹಾ ಕುಡಿಯುತ್ತಾ ಕುಳಿತಿದ್ದ ವೇಳೆ, ನೆಹರು ಒಂದು ಜೋಕ್ ಹೇಳುತ್ತಾರೆ. ಅದನ್ನು ಕೇಳಿ ಅರುಣ್ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾನೆ. ಯಾವುದೇ ಅಭಿನಯವಿಲ್ಲ, ಯಾವುದೇ ತಯಾರಿ ಇಲ್ಲ ಸಹಜವಾದ, ಹೃದಯದಿಂದ ಬಂದ ನಗು. ಆ ಕ್ಷಣವನ್ನು ನೆಹರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು. ಕೇವಲ ಮೋಜಿಗಾಗಿ ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರು.
ಅಲ್ಲಿ ನಡೆದದ್ದೇ ಅಚ್ಚರಿ. ಆ ವಿಡಿಯೋ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿತು. ಒಂದೂವರೆ ತಿಂಗಳ ಅವಧಿಯಲ್ಲಿ ಸುಮಾರು 40 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿತ್ತು. ಬಳಿಕ ಆ ನಗು ಟ್ರೋಲ್‌ಗಳ ಅವಿಭಾಜ್ಯ ಅಂಗವಾಗಿಬಿಟ್ಟಿತು. ಯಾವುದೇ ಫನ್ನಿ ವಿಡಿಯೋ ಆಗಿರಲಿ, ಕೊನೆಯಲ್ಲಿ ಅರುಣ್‌ನ ನಗು ಬಂದ್ರೆ ಮಾತ್ರ ಅದು “ಪೂರ್ಣ” ಅನ್ನಿಸುವಂತಾಯಿತು.
ಈ ವೈರಲ್ ವಿಡಿಯೋ ಉದ್ದೇಶಪೂರ್ವಕವಾಗಿ ಸೃಷ್ಟಿಸಿದದ್ದಲ್ಲ. ಯಾವುದೇ ರೀಲ್ಸ್ ಪ್ಲಾನ್, ಕ್ಯಾಮೆರಾ ಸೆಟಪ್, ಡೈಲಾಗ್ ಏನೂ ಇಲ್ಲ. ಬದುಕಿನ ಮಧ್ಯೆ ಆಕಸ್ಮಿಕವಾಗಿ ಸೆರೆಯಾದ ಒಂದು ನೈಜ ಕ್ಷಣ. ಅದೇ ಅರುಣ್‌ನ ಅದೃಷ್ಟವನ್ನೇ ಬದಲಾಯಿಸಿತು.
ವೈರಲ್ ಆದ ನಂತರ ಅರುಣ್ ತೆಲಂಗಾಣದಲ್ಲಿ ಮನೆಮಾತಾಗಿದ. ಅನೇಕ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ. ತನ್ನ ಜೀವನದ ಕಷ್ಟ, ನಗುವಿನ ಶಕ್ತಿ, ಬಡತನದ ದಿನಗಳನ್ನು ಮುಕ್ತವಾಗಿ ಹಂಚಿಕೊಂಡ. “ನಗು ಅನ್ನೋದು ದುಡ್ಡು ಇಲ್ಲದೇ ಹಂಚಿಕೊಳ್ಳಬಹುದಾದ ದೊಡ್ಡ ಸಂಪತ್ತು” ಎಂಬ ಮಾತನ್ನು ತನ್ನ ಬದುಕಿನ ಮೂಲಕ ಸಾಬೀತುಪಡಿಸಿದ.
ಇಷ್ಟಕ್ಕೆಲ್ಲಾ ಕಾರಣರಾದ ಚಾಲಕ ನೆಹರು, ಅರುಣ್ ಬೆನ್ನಿಗೆ ನಿಂತರು. ಓದನ್ನು ಮಧ್ಯದಲ್ಲೇ ಬಿಟ್ಟಿದ್ದ ಅರುಣ್ ಮತ್ತೆ ಶಿಕ್ಷಣದ ಕಡೆಗೆ ತಿರುಗಲು ಸಹಾಯ ಮಾಡಿದರು. ಅವರ ಪ್ರೋತ್ಸಾಹದಿಂದ ಅರುಣ್ ಇದೀಗ 10ನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗಿದ್ದಾನೆ.. ಇನ್ನೊಂದು ಪ್ರೇರಣಾದಾಯಕ ಸಂಗತಿ.
ಇದೀಗ ಅರುಣ್ ತನ್ನದೇ ಇನ್‌ಸ್ಟಾಗ್ರಾಂ ಅಕೌಂಟ್ ತೆರೆದು, ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದಾನೆ. ಒಂದು ಕಾಲದಲ್ಲಿ ಜೀವನಕ್ಕಾಗಿ ಲಾರಿ ಕ್ಲೀನರ್ ಆಗಿದ್ದ ಹುಡುಗ, ಇಂದು ಲಕ್ಷಾಂತರ ಮಂದಿಗೆ ನಗುವಿನ ಕಾರಣನಾಗಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಬರುತ್ತವೆ, ಹೋಗುತ್ತವೆ. ಆದರೆ ಅರುಣ್‌ನ ನಗು ಮಾತ್ರ ಉಳಿದಿದೆ. ಏಕೆಂದರೆ ಅದು ಅಭಿನಯವಲ್ಲ, ಅದು ಹೃದಯದಿಂದ ಬಂದ ನಗು. ಒಂದೇ ಒಂದು ನಗು ಹೇಗೆ ಜೀವನವನ್ನೇ ಬದಲಾಯಿಸಬಹುದು ಅನ್ನೋದಕ್ಕೆ, ಇಂದು ಉತ್ತರವಾಗಿ ನಿಂತಿದ್ದಾನೆ Viral Boy ಅರುಣ್.





