ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನಲ್ಲಿ ಈಜಲು (Swimming) ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ದುರಂತ ಘಟನೆ ಸಂಭವಿಸಿದೆ. ಶಿರಸಿ ತಾಲೂಕಿನ ಉಂಚಳ್ಳಿ (Unchalli) ಸಮೀಪದ ಮಾಸ್ತಿಜಡ್ಡಿ (Mastijaddi) ಗ್ರಾಮದಲ್ಲಿನ ಹೊಳೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಈಜಲು ತೆರಳಿದ್ದ ವೇಳೆ ಹೊಳೆಗೆ ನೀರಿನಲ್ಲಿ ಮುಳುಗಿ ಇಬ್ಬರೂ ಯುವಕರು ಸಾವನ್ನಪ್ಪಿದ್ದಾರೆ.
ಮೃತರ ವಿವರ
ಮೃತ ದುರ್ದೈವಿಗಳನ್ನು ಮಾಸ್ತಿಜಡ್ಡಿ ಗ್ರಾಮದ ಮದನ್ ನಾಯ್ಕ (17) ಹಾಗೂ ಹೊನ್ನಾವರದ ಲೋಹಿತ್ ನಾಯ್ಕ (19) ಎಂದು ಗುರುತಿಸಲಾಗಿದೆ. ಇಬ್ಬರೂ ಯುವಕರು ಸ್ನೇಹಿತರಾಗಿದ್ದು, ಶನಿವಾರ ಮಧ್ಯಾಹ್ನ ಈಜಲು ಎಂದು ಹೊಳೆಗೆ ತೆರಳಿದ್ದರು. ಆದರೆ, ಅವರು ಈಜಲು ಹೋದ ಸ್ಥಳ ಆಳವಾಗಿತ್ತು. ಅದರ ಅರಿವಿಲ್ಲದೆಯೇ ಅವರು ನೀರಿಗಿಳಿದಿದ್ದು, ನಿಯಂತ್ರಣ ತಪ್ಪಿ ಮುಳುಗಿ ಹೋಗಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷನೆಗೆ ಮುಂದಾದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ರೆಸ್ಕ್ಯೂ ತಂಡದ ಶವ ಶೋಧ
ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯರು, ತಕ್ಷಣವೇ ಶ್ರೀ ಮಾರಿಕಾಂಬ ರೆಸ್ಕ್ಯೂ ಟೀಮ್ (Shri Marikamba Rescue Team) ಗೆ ಮಾಹಿತಿ ನೀಡಿದರು. ರೆಸ್ಕ್ಯೂ ತಂಡದ ಗೋಪಾಲ ಗೌಡ ಅವರ ನೇತೃತ್ವದಲ್ಲಿ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಶವ ಶೋಧ ಕಾರ್ಯಾಚರಣೆ ನಡೆಸಿತು. ಕೆಲವು ಗಂಟೆಗಳ ಸತತ ಪ್ರಯತ್ನದ ಬಳಿಕ, ತಂಡವು ಮದನ್ ಮತ್ತು ಲೋಹಿತ್ ಅವರ ಶವಗಳನ್ನು 15 ಅಡಿ ಆಳದ ಬಾಂದಾರಿನ ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಯಿತು.
ಪೊಲೀಸ್ ತನಿಖೆ
ಘಟನೆಯ ಬಗ್ಗೆ ಮಾಹಿತಿ ಪಡೆದ ಬನವಾಸಿ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಘಟನೆಯ ಬಗ್ಗೆ ವಿವರಗಳನ್ನು ಕಲೆ ಹಾಕಿದರು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ (Post-mortem) ಶಿರಸಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಮೃತರ ಶವಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಈ ಘಟನೆ ಸಂಬಂಧಿತವಾಗಿ ಬನವಾಸಿ ಠಾಣೆಯಲ್ಲಿ ಪ್ರಕರಣವನ್ನು (Case) ದಾಖಲಿಸಲಾಗಿದೆ.





