ಮೆಕ್ಸಿಕೋದಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲಾ ನೀರಿನಿಂದ ತುಂಬಿಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಯ ಮಧ್ಯದಲ್ಲಿದ್ದ ದೊಡ್ಡ ಗುಂಡಿಯೊಂದಕ್ಕೆ ಬೈಕ್ ಸವಾರನೊಬ್ಬ ಬಿದ್ದ ಘಟನೆ ಸಂಭವಿಸಿದೆ. ಈ ಘಟನೆಯ ವಿಡಿಯೋ ಒಂದು ಸುದ್ದಿವಾಹಿನಿಯ ಲೈವ್ ಪ್ರಸಾರದಲ್ಲಿ ಸೆರೆಯಾಗಿದೆ.
ಸದ್ಯ ಬೈಕ್ ಸವಾರನನ್ನು ರಕ್ಷಿಸಲಾಗಿದ್ದು, ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಈ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪತ್ರಕರ್ತೆಯೊಬ್ಬರು ಯಾವುದೇ ಸಹಾಯಕ್ಕೆ ಮುಂದಾಗದೆ ತಮ್ಮ ಸುದ್ದಿ ವರದಿಯನ್ನೇ ಮುಂದುವರೆಸಿದ್ದು, ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ಪತ್ರಕರ್ತೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಪತ್ರಕರ್ತೆಯ ವರ್ತನೆಯ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು “ಮಾನವೀಯತೆಯ ಕೊರತೆ” ಎಂದು ಕರೆದಿದ್ದಾರೆ.
ಪೂರ್ವ ಪೆಸಿಫಿಕ್‌ನಲ್ಲಿ ಉಷ್ಣವಲಯದ ವಾಯುಭಾರ ಕುಸಿತದಿಂದ ದಕ್ಷಿಣ ಮೆಕ್ಸಿಕೋದಲ್ಲಿ ಚಂಡಮಾರುತದ ಆರ್ಭಟ ಜೋರಾಗಿದೆ. ಈ ಚಂಡಮಾರುತದಿಂದಾಗಿ ದಕ್ಷಿಣ ಮೆಕ್ಸಿಕೋದ ಹಲವು ನಗರಗಳು ಜಲಾವೃತವಾಗಿವೆ. ಚಿಯಾಪಾಸ್, ಟಬಾಸ್ಕೊ, ಮತ್ತು ವರಾಕ್ರಜ್ ರಾಜ್ಯಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಕಂಡುಬಂದಿದೆ. ರಸ್ತೆಗಳು ನದಿಯಂತೆ ಭೋರ್ಗರೆಯುತ್ತಿವೆ, ಮನೆಗಳು ಮತ್ತು ಬಡಾವಣೆಗಳು ಮುಳುಗಿವೆ. ಪ್ರವಾಹದ ನೀರಿನಲ್ಲಿ ಸಿಕ್ಕಸಿಕ್ಕ ವಸ್ತುಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ತಮೌಲಿಪಾಸ್ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, 690ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರೆನೋಸಾ ನಗರದ ಅಧಿಕಾರಿಗಳು ತಿಳಿಸಿದ್ದಾರೆ. ಈಶಾನ್ಯ ಮೆಕ್ಸಿಕೋದ ಕೆಲವು ಭಾಗಗಳಲ್ಲಿ 7 ರಿಂದ 12 ಇಂಚುಗಳಷ್ಟು ಮಳೆಯಾಗಿದೆ ಎಂದು ವರದಿ ಆಗಿದೆ.
ಈ ಭಾರೀ ಮಳೆಯಿಂದಾಗಿ ಕೆಲವೆಡೆ ಸಾವು-ನೋವು ಸಂಭವಿಸಿದೆ. ರೆನೋಸಾದಲ್ಲಿ 83 ವರ್ಷದ ವ್ಯಕ್ತಿಯೊಬ್ಬರು ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದಾಗಿ ಮೆಕ್ಸಿಕೋದ ಜನತೆ ಆತಂಕದಲ್ಲಿದ್ದಾರೆ. ಸರಕಾರ ತಕ್ಷಣದ ಕ್ರಮ ಕೈಗೊಂಡಿದ್ದು, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಸರಕಾರಿ ಯಂತ್ರಗಳು ಸಂತ್ರಸ್ತರಿಗೆ ನೆರವು ಒದಗಿಸುತ್ತಿವೆ.





