ಕಿಂಗ್ ಈಸ್ ಬ್ಯಾಕ್ ಅಂದರೆ ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲಾಡಲೇಬೇಕು. ಯೆಸ್, ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಪಂಚಾದ್ಯಂತ ಧೂಳೆಬ್ಬಿಸುತ್ತಿದೆ. ಒಂದೆಡೆ 175 ಕೋಟಿಗೆ ಓವರ್ಸೀಸ್ ಹಕ್ಕುಗಳು ಸೇಲ್ ಆಗಿ ಭಾರತೀಯ ಚಿತ್ರರಂಗದಲ್ಲೇ ಸಾರ್ವಕಾಲಿಕ ಹೊಸ ಇತಿಹಾಸ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ಮ್ಯೂಸಿಕ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌತ್ ಮ್ಯೂಸಿಕ್ ಸೆನ್ಸೇಷನ್ ಅನಿರುದ್ಧ್ ರವಿಚಂದರ್ ಈ ಚಿತ್ರದಿಂದ ಔಟ್ ಆಗಿದ್ದಾರೆ ಅನ್ನೋ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಬಿಗ್ ಅಪ್ಡೇಟ್ಸ್ಗಳ ಹಿಂದಿರೋ ಅಸಲಿ ರಹಸ್ಯವೇನು..?
- ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ಕಿಂಗ್ ಓವರ್ಸೀಸ್ ಹಕ್ಕು ಸೇಲ್
- ಕಾಲ್ಶೀಟ್ ಸಮಸ್ಯೆ.. ಕಿಂಗ್ನಿಂದ ಸಂಗೀತ ನಿರ್ದೇಶಕ ಅನಿರುದ್ಧ್ ಎಕ್ಸಿಟ್
- ಕಿಂಗ್ಗಾಗಿ ಮಾಸ್ ಥೀಮ್ ಟ್ರ್ಯಾಕ್ ಕೊಟ್ಟ ಅನಿರುದ್ದ್
- ಮದುವೆಯ ವದಂತಿಗೆ ತೆರೆ.. ಟೈಮ್ ಕ್ರಂಚ್ ಅಸಲಿ ಕಾರಣನಾ..?
ಪಠಾನ್’ ಮತ್ತು ‘ವಾರ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಿಂಗ್ ಗ್ಯಾಂಗ್ಸ್ಟರ್ ಆಕ್ಷನ್ ಡ್ರಾಮಾ, ರಿಲೀಸ್ಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಪ್ರಸಿದ್ಧ ಫಾರ್ಸ್ ಫಿಲ್ಮ್ಸ್ ಸಂಸ್ಥೆಯು ಈ ಚಿತ್ರದ ಓವರ್ಸೀಸ್ ವಿತರಣೆಯ ಹಕ್ಕನ್ನು ಭಾರಿ ₹175 ಕೋಟಿ ರೂಪಾಯಿಗಳಿಗೆ ಮಿನಿಮಮ್ ಗ್ಯಾರಂಟಿ ಆಧಾರದ ಮೇಲೆ ಖರೀದಿ ಮಾಡಿದೆ. ಭಾರತೀಯ ಸಿನಿಮಾವೊಂದರ ವಿದೇಶಿ ಹಕ್ಕುಗಳು ಈ ಮಟ್ಟಕ್ಕೆ ಸೇಲ್ ಆಗಿರುವುದು ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ಇತಿಹಾಸದಲ್ಲೇ ಇದೇ ಮೊದಲು. ಶಾರುಖ್ ಅವರ ಗ್ಲೋಬಲ್ ಕ್ರೇಜ್ ಮುಂದೆ ಉಳಿದೆಲ್ಲಾ ದಾಖಲೆಗಳು ಧೂಳಿಪಟವಾಗಿವೆ.
ಇನ್ನು ಸಿನಿಮಾದ ಸಂಗೀತ ವಿಭಾಗದಲ್ಲಿ ದೊಡ್ಡ ಭೂಕಂಪವೇ ಸಂಭವಿಸಿದೆ. ಶಾರುಖ್ ಖಾನ್ ಹಾಗೂ ಅನಿರುದ್ಧ್ ರವಿಚಂದರ್ ಕಾಂಬಿನೇಷನ್ ಮತ್ತೆ ಕಮಾಲ್ ಮಾಡುತ್ತೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಾಲು ಸಾಲು ಸೌತ್ ಸಿನಿಮಾಗಳ ಬ್ಯುಸಿ ಶೆಡ್ಯೂಲ್ನಿಂದಾಗಿ ‘ಕಿಂಗ್’ ಚಿತ್ರಕ್ಕೆ ಅಗತ್ಯವಿರುವಷ್ಟು ಸಮಯ ನೀಡಲಾಗದೆ ಅನಿರುದ್ಧ್ ಈ ಪ್ರಾಜೆಕ್ಟ್ನಿಂದ ಹೊರಬಂದಿದ್ದಾರೆ. ಮದುವೆಯ ಕಾರಣಕ್ಕೆ ಹಿಂದೆ ಸರಿದರು ಎಂಬ ವದಂತಿಗಳಿದ್ದರೂ, ಅಸಲಿ ಕಾರಣ ಮಾತ್ರ ಕಾಲ್ಶೀಟ್ ಮತ್ತು ಟೈಮ್ ಕ್ರಂಚ್ ಎಂಬ ಸತ್ಯ ಈಗ ಹೊರಬಿದ್ದಿದೆ.
ಅನಿರುದ್ಧ್ ಹೊರಬಂದರೂ ಶಾರುಖ್ ಫ್ಯಾನ್ಸ್ಗೆ ಒಂದು ಖುಷಿಯ ಸುದ್ದಿ ಇದೆ. ನಿರ್ಗಮಿಸುವ ಮುನ್ನವೇ ಅನಿರುದ್ಧ್ ಈ ಸಿನಿಮಾಗಾಗಿ ಒಂದು ಪವರ್ಫುಲ್ ಮಾಸ್ ಥೀಮ್ ಟ್ರ್ಯಾಕ್ ರಚಿಸಿಕೊಟ್ಟಿದ್ದು, ಚಿತ್ರತಂಡ ಅದನ್ನು ಸಿನಿಮಾದಲ್ಲಿ ಉಳಿಸಿಕೊಂಡಿದೆ. ಇನ್ನುಳಿದ ಎಲ್ಲಾ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಬೃಹತ್ ಜವಾಬ್ದಾರಿ ಈಗ ಬಾಲಿವುಡ್ನ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಜೋಡಿ ಸಚಿನ್-ಜಿಗರ್ ಹೆಗಲೇರಿದೆ. ಅನಿರುದ್ಧ್ ಅವರ ಥೀಮ್ ಟ್ರ್ಯಾಕ್ಗೆ ತಕ್ಕಂತೆ ಬ್ಯಾಕ್ಗ್ರೌಂಡ್ ಸ್ಕೋರ್ ಟ್ಯೂನ್ ಮಾಡುವ ಸವಾಲು ಈಗ ಈ ಜೋಡಿಯ ಮೇಲಿದೆ.
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅವರ ಬೆಳ್ಳಿಪರದೆಯ ಬಿಗ್ ಡೆಬ್ಯೂಗೆ ಈ ಸಿನಿಮಾ ವೇದಿಕೆಯಾಗಿದ್ದು, ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅನಿಲ್ ಕಪೂರ್, ಜಾಕಿ ಶ್ರಾಫ್, ಜೈದೀಪ್ ಅಹ್ಲಾವತ್ ಹಾಗೂ ಅರ್ಷದ್ ವಾರ್ಸಿ ಅವರಂತಹ ದೈತ್ಯ ತಾರಾಗಣವೇ ಇದೆ. ಸಕಲ ತಯಾರಿಯೊಂದಿಗೆ ಈ ಬೃಹತ್ ದೃಶ್ಯಕಾವ್ಯವು 2026 ರ ಡಿಸೆಂಬರ್ 24 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





