ಹೈದರಾಬಾದ್: ಮದುವೆಯ ಬಟ್ಟೆ ತೊಟ್ಟು ಸಪ್ತಪದಿ ತುಳಿಯಬೇಕಿದ್ದ ಯುವಕನೊಬ್ಬ ಅದೇ ಮದುವೆಯ ಉಡುಪಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಕೆಪಿಹೆಚ್‌ಬಿ (KPHB) ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್‌ನಲ್ಲಿ ನಡೆದಿದೆ.
ಮೃತ ಯುವಕನನ್ನು ಅನಂತಪುರ ಜಿಲ್ಲೆಯ ಚೆರ್ಲೋಪಲ್ಲಿ ಗ್ರಾಮದ ವನಮಾ ಲೋಕೇಶ್ ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್‌ನ ಚಿಂತಲ್ ಗಣೇಶ್ ನಗರದಲ್ಲಿ ವಾಸವಿದ್ದು, ಗಂಡಿಮೈಸಮ್ಮದ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿ ಕೆಲಸ ಮಾಡುವಾಗ ಅಂಬಿಕಾ ಎಂಬ ಯುವತಿಯ ಪರಿಚಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಮದುವೆಯಾಗಿ ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದರು.
ಲೋಕೇಶ್ ತನ್ನ ಪ್ರೀತಿಯ ವಿಷಯವನ್ನು ಮನೆಯಲ್ಲಿ ತಿಳಿಸಿದಾಗ ಅವನ ಕುಟುಂಬದವರು ಒಪ್ಪಿಗೆ ನೀಡಿದ್ದರು. ಆದರೆ, ಯುವತಿ ಅಂಬಿಕಾಳ ಕುಟುಂಬದವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಿರಿಯರು ಒಪ್ಪದಿದ್ದರೂ ಪರಸ್ಪರ ಮದುವೆಯಾಗಲು ನಿರ್ಧರಿಸಿದ ಈ ಜೋಡಿಗೆ ಲೋಕೇಶ್ ಪೋಷಕರು ಹಣಕಾಸಿನ ನೆರವು ನೀಡಿದ್ದರು. ಆ ಹಣದಿಂದ ಲೋಕೇಶ್ ಮದುವೆಯ ಬಟ್ಟೆಗಳು ಮತ್ತು ಚಿನ್ನದ ತಾಳಿಯನ್ನು ಖರೀದಿಸಿ ಸಂಭ್ರಮದಿಂದ ಮದುವೆಗೆ ಸಿದ್ಧನಾಗಿದ್ದನು.
ಓಯೋ ರೂಮಿನಲ್ಲಿ ನಡೆದಿದ್ದೇನು?
ಯುವತಿಯ ಮನೆಯವರಿಂದ ತಮಗೆ ಅಪಾಯವಿರಬಹುದು ಎಂಬ ಭಯದಿಂದ ಈ ಪ್ರೇಮಿಗಳು ಕೆಪಿಹೆಚ್‌ಬಿ ಅಡ್ಡಗುಟ್ಟ ಸೊಸೈಟಿಯ ‘ಫ್ಲ್ಯಾಗ್ ಶಿಪ್ ಸೌತ್ ಪಾಯಿಂಟ್ ರೆಸಿಡೆನ್ಸಿ’ (OYO) ಹೋಟೆಲ್‌ನಲ್ಲಿ ರೂಮ್ ಪಡೆದಿದ್ದರು. ಶುಕ್ರವಾರ ಮಧ್ಯಾಹ್ನ ಲೋಕೇಶ್ ಅಂಬಿಕಾಳನ್ನು ಊಟ ತರಲು ಹೊರಗೆ ಕಳುಹಿಸಿದ್ದನು. ಅಂಬಿಕಾ ಹೊರಗೆ ಹೋದ ಸಮಯವನ್ನೇ ಬಳಸಿಕೊಂಡ ಲೋಕೇಶ್, ತಾನು ಖರೀದಿಸಿದ್ದ ಮದುವೆಯ ಬಟ್ಟೆಗಳನ್ನು ಧರಿಸಿ, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಊಟ ಹಿಡಿದು ಸಂಭ್ರಮದಿಂದ ವಾಪಸ್ ಬಂದ ಅಂಬಿಕಾ ಬಾಗಿಲು ಬಡಿದಾಗ ಒಳಭಾಗದಿಂದ ಚಿಲಕ ಹಾಕಲಾಗಿತ್ತು. ಎಷ್ಟು ಕರೆದರೂ ಲೋಕೇಶ್ ಓಗೊಡದಿದ್ದಾಗ ಗಾಬರಿಗೊಂಡ ಆಕೆ ಹೋಟೆಲ್ ಸಿಬ್ಬಂದಿಯ ಸಹಾಯದಿಂದ ಬಾಗಿಲು ಒಡೆದಿದ್ದಾಳೆ. ಅಲ್ಲಿನ ದೃಶ್ಯ ಕಂಡು ಯುವತು ಕುಸಿದು ಬಿದ್ದಿದ್ದಾಳೆ.ಮದುವೆಯ ಬಟ್ಟೆಯಲ್ಲೇ ಲೋಕೇಶ್ ಫ್ಯಾನ್‌ಗೆ ನೇಣುಬಿಗಿದುಕೊಂಡಿದ್ದನು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆತ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ.
ಮಾಹಿತಿ ತಿಳಿದ ಕೆಪಿಹೆಚ್‌ಬಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಕುಟುಂಬ ಸದಸ್ಯರ ವಿರೋಧ ಮತ್ತು ಬೆದರಿಕೆಯೇ ಈ ಆತ್ಮಹತ್ಯೆಗೆ ಪ್ರಮುಖ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.





