ಉತ್ತರ ಪ್ರದೇಶ: ಸಿನಿಮಾದ ಕಥೆಯನ್ನೂ ಮೀರಿಸುವಂತಹ ಅಚ್ಚರಿಯ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. 25 ವರ್ಷ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದಾರೆ. ಈ 25 ಸತ್ತುಹೋದನೆಂದು ಭಾವಿಸಿದ್ದ ಪತಿ ಈಗ ಮರಳಿ ಬಂದಿದ್ದಾನೆ. ಆದರೆ ಈಕೆ ತನ್ನ ಮೈದುನನ ಜೊತೆ ಸಂಸಾರ ನಡೆಸಿ ಮಕ್ಕಳ ತಾಯಿಯಾಗಿದ್ದಾಳೆ.
ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಶಿವದಯಾಳ್ ವಾಲಾ ಗ್ರಾಮದ ಹನ್ಸಾ ಸಿಂಗ್ ಎಂಬುವವರು 25 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಮದುವೆಯಾದ ಕೇವಲ ಎರಡು ವರ್ಷಗಳಲ್ಲೇ ಹನ್ಸಾ ಕಾಣೆಯಾಗಿದ್ದರಿಂದ ಕುಟುಂಬದವರು ಕಂಗೆಟ್ಟಿದ್ದರು. ಮೂರು ವರ್ಷಗಳ ಕಾಲ ಅವರಿಗಾಗಿ ಕಾದಿದ್ದ ಕುಟುಂಬಸ್ಥರು, ಹನ್ಸಾ ಸಿಂಗ್ ಸತ್ತುಹೋಗಿರಬಹುದು ಎಂದು ಭಾವಿಸಿ ಅವರ ಅಂತ್ಯಕ್ರಿಯೆಯನ್ನೂ ಮಾಡಿದ್ದರು.
ನಂತರ ಹನ್ಸಾ ಅವರ ಪತ್ನಿ ವಿಮಲಾ ದೇವಿಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಕೆಯನ್ನು ಹನ್ಸಾ ಅವರ ಕಿರಿಯ ಸಹೋದರ (ಮೈದುನ) ಸುಖ ಸಿಂಗ್‌ಗೆ ಕೊಟ್ಟು ಮದುವೆ ಮಾಡಲಾಯಿತು. ಕಳೆದ 22 ವರ್ಷಗಳಿಂದ ವಿಮಲಾ ತನ್ನ ಎರಡನೇ ಪತಿ ಸುಖ ಸಿಂಗ್ ಜೊತೆ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಮತ್ತು ಅವರ ಮಗಳ ಮದುವೆಯೂ ಆಗಿತ್ತು.
ಮೂರು ದಿನಗಳ ಹಿಂದೆ ಬಿಜ್ನೋರ್ ಜಿಲ್ಲೆಯ ನಹ್ತೌರ್ ಮಾರುಕಟ್ಟೆಯಲ್ಲಿ ಹರಿದ ಬಟ್ಟೆ ಧರಿಸಿದ್ದ, ಉದ್ದನೆಯ ಗಡ್ಡ ಬಿಟ್ಟಿದ್ದ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಪ್ರತಾಪ್ ಸಿಂಗ್ ಅವರು ಆ ವ್ಯಕ್ತಿಯನ್ನು ವಿಚಾರಿಸಿದಾಗ, ಆತ ತನ್ನ ಹೆಸರು ಹನ್ಸಾ ಸಿಂಗ್ ಮತ್ತು ತನ್ನ ಊರು ಪಂಜಾಬ್‌ನ ಕಪುರ್ತಲಾ ಎಂದು ಹೇಳಿದ್ದಾನೆ.
ತಕ್ಷಣವೇ ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದ ಬಿಜ್ನೋರ್ ಪೊಲೀಸರು, ಹನ್ಸಾ ಅವರ ಕುಟುಂಬಕ್ಕೆ ಮಾಹಿತಿ ನೀಡಿದರು. 72 ಗಂಟೆಗಳಲ್ಲಿ ಹನ್ಸಾ ಅವರ ಸಹೋದರ ಮತ್ತು ಗ್ರಾಮದ ಮುಖ್ಯಸ್ಥರು ಸ್ಥಳಕ್ಕೆ ಬಂದರು. ಮೊದಲ ನೋಟಕ್ಕೆ ಸಹೋದರನಿಗೂ ಹನ್ಸಾನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಹನ್ಸಾ ತನ್ನ ಬಾಲ್ಯದ ಗೆಳೆಯರು ಮತ್ತು ಕುಟುಂಬದ ಹಳೆಯ ನೆನಪುಗಳನ್ನು ಹೇಳಿದಾಗ ಎಲ್ಲುವೂ ನೆನಪಾಗಿದೆ.
ಹನ್ಸಾ ಸಿಂಗ್ ಮನೆಗೆ ಮರಳಿರುವುದು ಕುಟುಂಬಕ್ಕೆ ಆನಂದ ತಂದಿದ್ದರೂ, ಮತ್ತೊಂದೆಡೆ ಅತೀವ ಗೊಂದಲ ಸೃಷ್ಟಿಸಿದೆ. ಪತ್ನಿ ವಿಮಲಾ ದೇವಿ ಈಗ ತನ್ನ ಮೈದುನನ ಪತ್ನಿಯಾಗಿದ್ದಾಳೆ ಮತ್ತು ಅವರಿಗೆ ಮಕ್ಕಳಿದ್ದಾರೆ. ಪ್ರಸ್ತುತ ಹನ್ಸಾ ಸಿಂಗ್ ಅವರನ್ನು ಪಂಜಾಬ್‌ಗೆ ಕರೆದೊಯ್ಯಲಾಗಿದೆ.





