ಕೃತಕ ಬುದ್ಧಿಮತ್ತೆ (ಎಐ) ಭವಿಷ್ಯದ ಉದ್ಯೋಗಗಳ ಮೇಲೆ, ವಿಶೇಷವಾಗಿ ಐಟಿ ಮತ್ತು ಟೆಕ್ ಕ್ಷೇತ್ರದಲ್ಲಿ ಭಾರೀ ಪರಿಣಾಮ ಬೀರುತ್ತದೆ ಎಂಬ ಚರ್ಚೆಯು ದೀರ್ಘಕಾಲದಿಂದ ನಡೆಯುತ್ತಿದೆ. ಆದರೆ, ಎಐ ಎಂಬುದು ಭವಿಷ್ಯವಲ್ಲ, ಇದು ಈಗಿನ ವಾಸ್ತವ. ಗೂಗಲ್‌ನ ಕೃತಕ ಬುದ್ಧಿಮತ್ತೆ ಸಂಶೋಧನಾ ಪ್ರಯೋಗಾಲಯವಾದ ಡೀಪ್‌ಮೈಂಡ್‌ನ ಸಿಇಒ ಡೆಮಿಸ್ ಹಸ್ಸಾಬಿಸ್, ‘ಹಾರ್ಡ್ ಫೋರ್ಕ್’ ಎಂಬ ಟೆಕ್ ಪಾಡ್‌ಕಾಸ್ಟ್‌ನಲ್ಲಿ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ: “ನೀವು ಎಐ ಕಲಿಯದಿದ್ದರೆ, ಮುಂದಿನ ದಿನಗಳಲ್ಲಿ ನೀವು ಬಯಸಿದ ಉದ್ಯೋಗವನ್ನು ಪಡೆಯುವುದು ಕಷ್ಟವಾಗಲಿದೆ.” ಎಐ ಈಗಾಗಲೇ ಹಲವು ಕ್ಷೇತ್ರಗಳನ್ನು ಆವರಿಸಿದ್ದು, ಕೆಲವು ಉದ್ಯೋಗಗಳನ್ನು ಕಸಿದುಕೊಂಡು ಆತಂಕ ಸೃಷ್ಟಿಸಿದೆ. ಇದು ಕೇವಲ ಆರಂಭವಷ್ಟೇ; ಮುಂದಿನ ಕೆಲವೇ ವರ್ಷಗಳಲ್ಲಿ ಎಐ ಯುಗವು ಸಂಪೂರ್ಣವಾಗಿ ತೆರೆದುಕೊಳ್ಳಲಿದೆ.
ಎಐ ಯುಗಕ್ಕೆ ಸಿದ್ಧರಾಗಿ ಡೆಮಿಸ್ ಹಸ್ಸಾಬಿಸ್:
ಡೆಮಿಸ್ ಹಸ್ಸಾಬಿಸ್ ಪ್ರಕಾರ, ಮುಂದಿನ 5-10 ವರ್ಷಗಳಲ್ಲಿ ಎಐ ಕ್ರಾಂತಿಯು ಖಚಿತವಾಗಿರಲಿದೆ. ಈ ಅವಧಿಯಲ್ಲಿ ಹಲವು ಕೆಲಸಗಳು ಕಾಣೆಯಾಗಲಿದ್ದರೂ, ಹೊಸ, ಕುತೂಹಲಕಾರಿ ಮತ್ತು ಮೌಲ್ಯಯುತ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು, ಎಐ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಗಳಿಸುವುದು ಅತ್ಯಗತ್ಯ. “ಎಐ ಟೂಲ್‌ಗಳ ಬಳಕೆಯನ್ನು ಇಂದಿನಿಂದಲೇ ಆರಂಭಿಸಿ. ಇದರಿಂದ ದಿನನಿತ್ಯದ ಆವಿಷ್ಕಾರಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಸುಲಭವಾಗುತ್ತದೆ,” ಎಂದು ಹಸ್ಸಾಬಿಸ್ ಸಲಹೆ ನೀಡಿದ್ದಾರೆ. ಅವರ ಕಿವಿಮಾತು: “ಮೊದಲು ಕಲಿಯಲು ಕಲಿಯಿರಿ.”
ಕೋಡಿಂಗ್ ಕಲಿಕೆ: ಎಐ ಜಗತ್ತಿನ ಕೀಲಿಕೈ
ತಂತ್ರಜ್ಞಾನವೇ ಭವಿಷ್ಯವಾದರೂ, ಕೇವಲ ಜ್ಞಾನ ಸಾಲದು. ಸದೃಢ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಜ್ಞಾನದ ಜೊತೆಗೆ ಕೋಡಿಂಗ್ ಕಲಿಕೆಗೆ ಆದ್ಯತೆ ನೀಡಬೇಕು. “ಕೋಡಿಂಗ್ ಎಂದರೆ ಕಂಪ್ಯೂಟರ್‌ಗೆ ಸೂಚನೆಗಳನ್ನು ನೀಡುವ ಕಲೆ. ಇದು ಎಐ ಜಗತ್ತಿಗೆ ಪ್ರವೇಶದ ಕೀಲಿಯಂತೆ,” ಎಂದು ಹಸ್ಸಾಬಿಸ್ ವಿವರಿಸಿದ್ದಾರೆ. ಸೃಜನಶೀಲತೆ, ಹೊಂದಿಕೊಳ್ಳುವಿಕೆಯಂತಹ ‘ಮೆಟಾ ಕೌಶಲ್ಯ’ಗಳನ್ನು ಬೆಳೆಸಿಕೊಂಡು, ನಿರಂತರ ಬದಲಾವಣೆಗೆ ಒಗ್ಗಿಕೊಳ್ಳುವುದು ಅಗತ್ಯ. ಎಐ ಎಂಬುದು ಭವಿಷ್ಯವಲ್ಲ, ಇಂದಿನ ವಾಸ್ತವ.
ಶಿಕ್ಷಣದ ಜೊತೆ ಎಐ ಕಲಿಕೆ ಅತ್ಯಗತ್ಯ:
ಎಐ ಉದ್ಯೋಗ ಕ್ಷೇತ್ರವನ್ನು ಆವರಿಸಿರುವುದರಿಂದ, ಯುವಕರು, ವಿಶೇಷವಾಗಿ ವಿದ್ಯಾರ್ಥಿಗಳು, ಈಗಿನಿಂದಲೇ ಎಐಗೆ ಸಿದ್ಧರಾಗಬೇಕು. “ಪಠ್ಯಕ್ರಮದ ಹೊರತಾಗಿಯೂ, ಎಐ ಕ್ರಾಂತಿಯ ಕುರಿತ ಕುತೂಹಲವನ್ನು ಜೀವಂತವಾಗಿರಿಸಿಕೊಳ್ಳಿ. ನಿರ್ದಿಷ್ಟ ವಿಷಯಗಳಲ್ಲಿ ಪರಿಣತಿಯನ್ನು ಗಳಿಸುವುದು ಮುಖ್ಯವಾದರೂ, ಯಂತ್ರಗಳು ಈಗ ಆ ಕೆಲಸಗಳನ್ನೂ ಮಾಡುತ್ತಿವೆ. ಆದ್ದರಿಂದ, ಎಐ ನಕಲಿಸಲಾಗದ ಕೌಶಲ್ಯಗಳಲ್ಲಿ ಪರಿಣಿತರಾಗಿ,” ಎಂದು ಹಸ್ಸಾಬಿಸ್ ಒತ್ತಿ ಹೇಳಿದ್ದಾರೆ. ಇಂತಹ ಕೌಶಲ್ಯಗಳು ದೀರ್ಘಾವಧಿಯ ಉದ್ಯೋಗ ಭದ್ರತೆಗೆ ಸಹಕಾರಿಯಾಗಲಿವೆ.
ಐಟಿಯ ಮೇಲೆ ಎಐನ ದಾಳಿ:
‘ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಕೆಲಸ ಕಡಿತ: ಎಐ ಉದ್ಯೋಗಿಗಳ ಯುಗ’ ಎಂಬ ಸುದ್ದಿಗಳು ಈಗಾಗಲೇ ಗಮನ ಸೆಳೆಯುತ್ತಿವೆ. ಎಐ ಮೊದಲಿಗೆ ಐಟಿ ಕ್ಷೇತ್ರದ ಮೇಲೆ ತನ್ನ ಪ್ರಭಾವ ಬೀರಿದೆ. ಮೂಲಭೂತ ಐಟಿ ಉದ್ಯೋಗಗಳು ಈಗ ಎಐನಿಂದ ಸ್ವಯಂಚಾಲಿತವಾಗುತ್ತಿವೆ. “ಒಮ್ಮೆ ಎಐಗೆ ತರಬೇತಿ ನೀಡಿದರೆ, ಮಾನವನ ಹಸ್ತಕ್ಷೇಪದ ಅಗತ್ಯವಿಲ್ಲ. ಇದರಿಂದ ಕಂಪನಿಗಳ ಖರ್ಚು ಕಡಿಮೆಯಾಗುವುದಷ್ಟೇ ಅಲ್ಲ, ಕೆಲಸವೂ ತ್ವರಿತವಾಗುತ್ತದೆ,” ಎಂದು ಹಸ್ಸಾಬಿಸ್ ವಿವರಿಸಿದ್ದಾರೆ. ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಕೂಡ, “ಸಾಫ್ಟ್‌ವೇರ್ ಕೆಲಸಗಳ ಭವಿಷ್ಯ ಕೆಲವೇ ವರ್ಷಗಳಿಗೆ ಸೀಮಿತವಾಗಿರಬಹುದು,” ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಏಕೈಕ ಪರಿಹಾರ: ಎಐ ಮಾಡಬಹುದಾದ ಕೆಲಸಗಳನ್ನು ಬಿಟ್ಟು, ಎಐನಿಂದ ಕೆಲಸ ಮಾಡಿಸುವ ಕೌಶಲ್ಯವನ್ನು ಕಲಿಯಿರಿ.
ಎಐಗೆ ಮಾನವ ಬುದ್ಧಿಯ ಸಾಮರ್ಥ್ಯ:
ಕೆಲ ವರ್ಷಗಳ ಹಿಂದೆ ರೋಬೋಟ್‌ಗಳು ದೈಹಿಕ ಶ್ರಮವನ್ನು ಕಡಿಮೆ ಮಾಡಿದವು. ಈಗ ಎಐ ಮಾನವ ಬುದ್ಧಿಯಂತೆ ಕೆಲಸ ಮಾಡುವ ಸಾಮರ್ಥ್ಯವನ್ನು ಗಳಿಸುತ್ತಿದೆ. “ಎಐ ರೋಬೋಟ್‌ಗಳಿಗಿಂತ ಹತ್ತು ಪಟ್ಟು ಮುಂದಿದೆ, ಏಕೆಂದರೆ ಇದು ಬೌದ್ಧಿಕ ಕೆಲಸಗಳನ್ನು ಸ್ವಯಂಚಾಲಿತಗೊಳಿಸುತ್ತದೆ,” ಎಂದು ಹಸ್ಸಾಬಿಸ್ ತಿಳಿಸಿದ್ದಾರೆ. 2030ರ ವೇಳೆಗೆ ವಿಶ್ವದಲ್ಲಿ 30-80 ಕೋಟಿ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಬದಲಾವಣೆಯನ್ನು ಸ್ವೀಕರಿಸುವವರಿಗೆ ಇದರ ಎರಡುಪಟ್ಟು ಹೊಸ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ.
ಮಹಿಳೆಯರಿಗೆ ದೊಡ್ಡ ಸವಾಲು:
ಪ್ರಸ್ತುತ, ಎಐಗೆ ಸೃಜನಶೀಲತೆ, ಭಾವನಾತ್ಮಕತೆ, ಅಧಿಕ ಕೌಶಲ್ಯ ಒಡ್ಡದ ಕೆಲಸಗಳನ್ನು ಮಾತ್ರ ನೀಡಲಾಗಿದೆ. ಉದಾಹರಣೆಗೆ, ಕರೆಗಳಿಗೆ ಉತ್ತರಿಸುವುದು, ಸಮಯ ನಿಗದಿ, ದಾಖಲೆ ನಿರ್ವಹಣೆ, ಸ್ವಾಗತಕಾರ, ಸಹಾಯಕರ ಕೆಲಸಗಳು. ಈ ಕೆಲಸಗಳಲ್ಲಿ ಬಹುತೇಕ ಮಹಿಳೆಯರಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿ ತಿಳಿಸಿದೆ. ಇದರಿಂದ, ಮಹಿಳೆಯರಿಗೆ ನಿರುದ್ಯೋಗದ ಸವಾಲು ದೊಡ್ಡದಾಗಿದೆ. “ಈ ಕೆಲಸಗಳಿಗೆ ತರಬೇತಿಯೊಂದಿಗೆ ಪರ್ಯಾಯ ಉದ್ಯೋಗಗಳನ್ನು ಒದಗಿಸಬೇಕು,” ಎಂದು ಹಸ್ಸಾಬಿಸ್ ಸಲಹೆ ನೀಡಿದ್ದಾರೆ.
ಆತಂಕದ ಬದಲು ಬದಲಾವಣೆ:
“ಎಐ ಟೂಲ್‌ಗಳು ಮಾನವರಂತೆ ಕೆಲಸ ಮಾಡಬಹುದಾದರೂ, ಅವುಗಳನ್ನು ಸಿದ್ಧಪಡಿಸುವ ಮತ್ತು ನಿಯಂತ್ರಿಸುವ ಜವಾಬ್ದಾರಿ ಮಾನವರದ್ದೇ. ಆದ್ದರಿಂದ, ಆತಂಕಕ್ಕಿಂತ ಬದಲಾವಣೆಗೆ ಒಗ್ಗಿಕೊಳ್ಳುವುದು ಮುಖ್ಯ,” ಎಂದು ಹಸ್ಸಾಬಿಸ್ ಒತ್ತಿ ಹೇಳಿದ್ದಾರೆ. ಕೆಲಸ ಕಡಿತವನ್ನು ತಪ್ಪಿಸಲು ಈ ಕ್ರಮಗಳನ್ನು ಸೂಚಿಸಿದ್ದಾರೆ.
-
ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಎಐ ತರಬೇತಿಯನ್ನು ಸರ್ಕಾರಗಳು ಒದಗಿಸಬೇಕು.
-
ಎಐನನ್ನು ಉದ್ಯೋಗಿಗಳಿಗೆ ಪೂರಕವಾಗಿ ಬಳಸಬೇಕು, ಮಾನವರ ಬದಲಿಗೆ ಅಲ್ಲ.
-
ಕಂಪನಿಗಳು ಎಐನನ್ನು ಕ್ರಮೇಣ ಅಳವಡಿಸಿಕೊಂಡು, ಉದ್ಯೋಗಿಗಳಿಗೆ ಹೊಸ ಕೌಶಲ್ಯ ಕಲಿಯಲು ಸಮಯ ನೀಡಬೇಕು.
-
ಎಐ ಕಸಿಯಬಹುದಾದ ಕೆಲಸಗಳಲ್ಲಿರುವವರಿಗೆ ಪರ್ಯಾಯ ಉದ್ಯೋಗಕ್ಕೆ ತರಬೇತಿ ಒದಗಿಸಬೇಕು.
-
ನಿರುದ್ಯೋಗಿಗಳಿಗೆ ಆರ್ಥಿಕ ಬೆಂಬಲ ಮತ್ತು ಯೋಜನೆಗಳನ್ನು ರೂಪಿಸಬೇಕು.
ಎಐ ಮಾಡಲಾಗದ ಕೆಲಸಗಳು
ಎಐಗೆ ಭಾವನಾತ್ಮಕತೆ, ನೈತಿಕತೆ, ಸೃಜನಶೀಲತೆ, ಕಲ್ಪನಾಶಕ್ತಿ, ಅನುಭವ, ಅಂತಃಪ್ರಜ್ಞೆ, ನಾಯಕತ್ವದಂತಹ ಕೌಶಲ್ಯಗಳನ್ನು ನಕಲಿಸಲು ಸಾಧ್ಯವಿಲ್ಲ. “ಕಲಾವಿದರು, ಬರಹಗಾರರು, ಆಪ್ತ ಸಮಾಲೋಚಕರು, ಭಾಷಣಕಾರರು, ಸಾಮಾಜಿಕ ಕಾರ್ಯಕರ್ತರು, ಶಿಶುಪಾಲಕರು, ರಕ್ಷಣಾ ಸಿಬ್ಬಂದಿ, ವಿಶ್ಲೇಷಕರು, ಶಿಕ್ಷಕರು, ಮಾರ್ಗದರ್ಶಕರು, ಸಂಶೋಧಕರ ಜಾಗವನ್ನು ಎಐ ಎಂದಿಗೂ ಕಸಿಯಲಾರದು,” ಎಂದು ಹಸ್ಸಾಬಿಸ್ ತಿಳಿಸಿದ್ದಾರೆ.





