ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುತ್ತಿದ್ದ ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇದೀಗ ರಾಜಕೀಯ ಅಂಗಳಕ್ಕೆ ಪ್ರವೇಶಿಸಿದ್ದಾರೆ. ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಅವರಿಗೆ ಮಹತ್ವದ ಜವಾಬ್ದಾರಿಯನ್ನೂ ನೀಡಲಾಗಿದೆ. ಬಿಜೆಪಿಯ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಚಾಹಲ್ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿಯೊಂದಿಗೆ ಚಾಹಲ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕ್ರಿಕೆಟ್ ವೃತ್ತಿಜೀವನದ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು, ಇದೀಗ ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅಮರಪಾಲ್ ಮೌರ್ಯ ಅವರನ್ನು ಚಾಹಲ್ ಭೇಟಿ ಮಾಡಿದ್ದರು.
ಒಬಿಸಿ ಮೋರ್ಚಾದಲ್ಲಿ ಚಾಹಲ್‌ಗೆ ವಿಶೇಷ ಸ್ಥಾನ
ಬಿಜೆಪಿ ತನ್ನ ಒಬಿಸಿ ಮೋರ್ಚಾದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿವಿಧ ರಾಜ್ಯಗಳ ಮುಖಂಡರಿಗೆ ಹೊಸ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ. ಇದರ ಭಾಗವಾಗಿ ಯುಜುವೇಂದ್ರ ಚಾಹಲ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷ ಪ್ರಕಟಿಸಿದೆ.
ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಅಮರಪಾಲ್ ಮೌರ್ಯ ಈ ನೇಮಕಾತಿಗಳ ಕುರಿತು ಮಾಹಿತಿ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ ಹೊಸ ನೇಮಕಾತಿಗಳನ್ನು ಮಾಡಲಾಗಿದ್ದು, ಅವು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಉಪಾಧ್ಯಕ್ಷರಾಗಿ ಏಳು ನಾಯಕರ ನೇಮಕ
ಒಬಿಸಿ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ವಿವಿಧ ರಾಜ್ಯಗಳ ಏಳು ನಾಯಕರನ್ನು ನೇಮಕ ಮಾಡಲಾಗಿದೆ. ಅಸ್ಸಾಂನ ಜೋಗೆನ್ ಮೋಹನ್, ಒಡಿಶಾದ ಮಮತಾ ಮೊಹಂತ, ಉತ್ತರ ಪ್ರದೇಶದ ಸಂಗಮ್ ಲಾಲ್ ಗುಪ್ತಾ, ಮಹಾರಾಷ್ಟ್ರದ ಬಬನ್‌ರಾವ್ ರಾವ್ ಚೌಧರಿ, ದೆಹಲಿಯ ಸತ್ ಪ್ರಕಾಶ್ ರಾಣಾ, ಬಿಹಾರದ ಅರ್ಜುನ್ ಸಾಹ್ನಿ ಹಾಗೂ ಉತ್ತರ ಪ್ರದೇಶದ ಸಂಗೀತಾ ಬಲವಂತ್ ಬಿಂದ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷರ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕದ ಪ್ರಮೋದ್ ಮಧ್ವರಾಜ್‌ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ
ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿಯೂ ಮೂವರು ನಾಯಕರನ್ನು ನೇಮಕ ಮಾಡಲಾಗಿದೆ. ದೆಹಲಿಯ ಗಜೇಂದ್ರ ಯಾದವ್, ಕರ್ನಾಟಕದ ಪ್ರಮೋದ್ ಮಧ್ವರಾಜ್ ಹಾಗೂ ಛತ್ತೀಸ್‌ಗಢದ ಲಲಿತ್ ಚಂದ್ರಕರ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕದ ಪ್ರಮೋದ್ ಮಧ್ವರಾಜ್ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿರುವುದು ರಾಜ್ಯದ ಬಿಜೆಪಿ ವಲಯದಲ್ಲಿ ಗಮನ ಸೆಳೆದಿದೆ.
ಏಳು ರಾಷ್ಟ್ರೀಯ ಕಾರ್ಯದರ್ಶಿಗಳ ನೇಮಕ
ಇದೇ ವೇಳೆ ಬಿಜೆಪಿಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಗಳಾಗಿಯೂ ಏಳು ಮಂದಿಯನ್ನು ನೇಮಕ ಮಾಡಲಾಗಿದೆ. ಗುಜರಾತ್‌ನ ದಶರಥಜಿ ಠಾಕೋರ್, ತಮಿಳುನಾಡಿನ ಟಿ. ವರರಾಜನ್, ಜಾರ್ಖಂಡ್‌ನ ಸಂಜೀವ್ ಕುಮಾರ್, ಹರಿಯಾಣದ ಸರಿತಾ ಜಂಗಿದ್, ತೆಲಂಗಾಣದ ಕಡಗಂಚಿ ರಮೇಶ್, ಮಧ್ಯಪ್ರದೇಶದ ವೈಭವ್ ಪನ್ವಾರ್ ಹಾಗೂ ಬಿಹಾರದ ಭೀಮ್ ಕುಮಾರ್ ಸಾಹು ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿಗಳ ಜವಾಬ್ದಾರಿ ವಹಿಸಲಾಗಿದೆ.
ಇದಲ್ಲದೆ, ವಿವಿಧ ರಾಜ್ಯಗಳ 37 ಮಂದಿಯನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಒಬಿಸಿ ಮೋರ್ಚಾದ ರಾಷ್ಟ್ರೀಯ ಸಂಘಟನೆಯನ್ನು ವಿಸ್ತರಿಸಲು ಬಿಜೆಪಿ ಮುಂದಾಗಿದೆ.
ಯಾರು ಈ ಯುಜುವೇಂದ್ರ ಚಾಹಲ್?
1990ರಲ್ಲಿ ಜನಿಸಿದ ಯುಜುವೇಂದ್ರ ಚಾಹಲ್ ಭಾರತದ ಪ್ರಮುಖ ಲೆಗ್ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಅವರು, ತಮ್ಮ ವಿಶಿಷ್ಟ ಬೌಲಿಂಗ್ ಶೈಲಿ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯದಿಂದ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.
ಕ್ರಿಕೆಟ್ ಜಗತ್ತಿಗೆ ಪರಿಚಿತರಾಗುವ ಮೊದಲೇ ಚಾಹಲ್ ಸ್ಪರ್ಧಾತ್ಮಕ ಚೆಸ್ ಆಟಗಾರರಾಗಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಎರಡು ವಿಭಿನ್ನ ಕ್ರೀಡೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವ ವಿಶೇಷ ಸಾಧನೆ ಅವರದ್ದಾಗಿದೆ.
ಇನ್ನು ಟಿ20 ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಯೂ ಚಾಹಲ್ ಅವರ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ವಿವಿಧ ಟಿ20 ಟೂರ್ನಿಗಳಲ್ಲಿ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ.





