ಉತ್ತರಪ್ರದೇಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ತಂಡದ ಆಟಗಾರ ಯಶ್ ದಯಾಳ್‌ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಯಶ್ ದಯಾಳ್ ಅವರನ್ನು ಬಂಧಿಸದಂತೆ ಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಈ ಆದೇಶವು ಕ್ರಿಕೆಟಿಗ ದಯಾಳ್‌ಗೆ ತಾತ್ಕಾಲಿಕ ರಿಲೀಪ್ ನೀಡಿದಂತಾಗಿದೆ.
ಯಶ್ ದಯಾಳ್ ವಿರುದ್ಧ ಒಬ್ಬ ಯುವತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಈ ಸಂಬಂಧ ಜುಲೈ 6ರಂದು ಉತ್ತರಪ್ರದೇಶದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 69ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಯುವತಿಯು, ಯಶ್ ದಯಾಳ್ ತಮ್ಮೊಂದಿಗೆ ಕಳೆದ ಐದು ವರ್ಷಗಳಿಂದ ಪರಿಚಯದಲ್ಲಿದ್ದು, ತಮ್ಮೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರನ್ನು ಯುವತಿ ಐ.ಜಿ.ಆರ್.ಎಸ್. ಮೂಲಕ ನೇರವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಸಲ್ಲಿಸಿದ್ದರು.
ಆದರೆ, ಈ ಆರೋಪಗಳನ್ನು ಮತ್ತು ಎಫ್‌ಐಆರ್‌ನ್ನು ಪ್ರಶ್ನಿಸಿ ಯಶ್ ದಯಾಳ್ ತಮ್ಮ ವಕೀಲರ ಮೂಲಕ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ದ್ವಿಸದಸ್ಯ ಪೀಠವು ನಡೆಸಿತ್ತು. ವಿಚಾರಣೆಯ ಸಂದರ್ಭದಲ್ಲಿ, ಯಶ್ ದಯಾಳ್ ವಕೀಲರು, ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ತಮ್ಮ ಕಕ್ಷಿದಾರರನ್ನು ಬಂಧಿಸುವುದು ಅನಗತ್ಯವೆಂದು ವಾದಿಸಿದರು. ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಯಶ್ ದಯಾಳ್‌ರನ್ನು ಬಂಧಿಸದಂತೆ ತಡೆಯಾಜ್ಞೆ ನೀಡಿತ್ತು.
ಯಶ್ ದಯಾಳ್, ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಉತ್ತರಪ್ರದೇಶದವರಾದ ಯಶ್, ತಮ್ಮ ವೇಗದ ಬೌಲಿಂಗ್‌ನಿಂದ ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳೆದಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯಲ್ಲಿ, ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮತ್ತು ಎರಡೂ ಕಡೆಯ ವಾದಗಳನ್ನು ನ್ಯಾಯಾಲಯವು ಗಂಭೀರವಾಗಿ ಪರಿಶೀಲಿಸಲಿದೆ. ಯಶ್ ದಯಾಳ್‌ರ ಕಾನೂನು ತಂಡವು ಈ ಆರೋಪಗಳನ್ನು ಸುಳ್ಳೆಂದು ಸಾಬೀತುಪಡಿಸಲು ಪ್ರಯತ್ನಿಸಲಿದೆ.





