ಬೆಂಗಳೂರು: 2026ರ ಮಾರ್ಚ್ ತಿಂಗಳು ರಜೆಗಳ ಹಬ್ಬ ಎನ್ನಬಹುದು. ವಾರಾಂತ್ಯದ ರಜೆಗಳು ಹಾಗೂ ಪ್ರಮುಖ ಹಬ್ಬಗಳನ್ನು ಒಳಗೊಂಡು ಒಟ್ಟು 10 ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಳ್ಳಲಿವೆ. ಯುಗಾದಿ, ರಂಜಾನ್, ಮಹಾವೀರ ಜಯಂತಿಯಂತಹ ದೊಡ್ಡ ಹಬ್ಬಗಳು ಇದೇ ತಿಂಗಳು ಬರುತ್ತಿರುವುದು ವಿಶೇಷ.
ಮಾರ್ಚ್ ತಿಂಗಳ ಪ್ರಮುಖ ರಜೆಗಳ ಪಟ್ಟಿ
ಈ ತಿಂಗಳು ಒಟ್ಟು 5 ಪ್ರಮುಖ ಹಬ್ಬಗಳು ಇವೆ. ಆದರೆ, ಎಲ್ಲಾ ಹಬ್ಬಗಳಿಗೂ ಬ್ಯಾಂಕ್ ರಜೆ ಇರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ರಜೆಗಳ ವಿವರ ಹೀಗಿದೆ:
-
ಮಾರ್ಚ್ 01: ಭಾನುವಾರ
-
ಮಾರ್ಚ್ 08: ಭಾನುವಾರ
-
ಮಾರ್ಚ್ 14: ಎರಡನೇ ಶನಿವಾರ
-
ಮಾರ್ಚ್ 15: ಭಾನುವಾರ
-
ಮಾರ್ಚ್ 19: ಯುಗಾದಿ (ಗುರುವಾರ – ಸಾರ್ವತ್ರಿಕ ರಜೆ)
-
ಮಾರ್ಚ್ 21: ರಂಜಾನ್ (ಶನಿವಾರ – ಸಾರ್ವತ್ರಿಕ ರಜೆ)
-
ಮಾರ್ಚ್ 22: ಭಾನುವಾರ
-
ಮಾರ್ಚ್ 28: ನಾಲ್ಕನೇ ಶನಿವಾರ
-
ಮಾರ್ಚ್ 29: ಭಾನುವಾರ
-
ಮಾರ್ಚ್ 31: ಮಹಾವೀರ ಜಯಂತಿ (ಮಂಗಳವಾರ – ಸಾರ್ವತ್ರಿಕ ರಜೆ)
ಯಾರಿಗೆ ರಜೆ ?
ಮಾರ್ಚ್ 4 ರಂದು ಬರುವ ಹೋಳಿ ಹಾಗೂ ಏಪ್ರಿಲ್ ಸಮೀಪವಿರುವ ರಾಮನವಮಿ ಹಬ್ಬಗಳಿಗೆ ಕರ್ನಾಟಕ ಸರ್ಕಾರವಾಗಲಿ ಅಥವಾ ಬ್ಯಾಂಕ್ ವಲಯವಾಗಲಿ ಅಧಿಕೃತ ಸಾರ್ವತ್ರಿಕ ರಜೆ ಘೋಷಿಸಿಲ್ಲ. ಆದರೆ, ಬೆಂಗಳೂರಿನ ಐಟಿ-ಬಿಟಿ ಸೇರಿದಂತೆ ಕಾರ್ಪೊರೇಟ್ ವಲಯದಲ್ಲಿ ಮಾರ್ಚ್ 4 ರಂದು ಹೋಳಿ ಹಬ್ಬಕ್ಕೆ ರಜೆ ನೀಡಲಾಗಿದೆ. ಇನ್ನು ಸರ್ಕಾರಿ ನೌಕರರು ಮಾರ್ಚ್ 2ರ ಸೋಮವಾರ ‘ಪರಿಮಿತ ರಜೆ’ (Restricted Holiday) ಅಡಿಯಲ್ಲಿ ಹೋಳಿಗೆ ರಜೆ ಪಡೆಯಲು ಅವಕಾಶವಿದೆ.
ಉದ್ಯೋಗಿಗಳಿಗೆ ‘ಸರಣಿ ರಜೆ’ಯ ಬಂಪರ್ ಆಫರ್ !
ಈ ಬಾರಿ ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಸತತ ನಾಲ್ಕು ದಿನಗಳ ಕಾಲ ರಜೆ ಮಜಾ ಅನುಭವಿಸಲು ನೌಕರರಿಗೆ ಸುವರ್ಣಾವಕಾಶವಿದೆ.
-
ಮೊದಲ ಸರಣಿ ರಜೆ: ಮಾರ್ಚ್ 19 (ಯುಗಾದಿ) ಗುರುವಾರ ರಜೆ ಇದೆ. ಮಾರ್ಚ್ 21 (ರಂಜಾನ್) ಶನಿವಾರ ಮತ್ತು 22 ಭಾನುವಾರ ರಜೆ ಇದೆ. ಒಂದು ವೇಳೆ ನೌಕರರು ಮಾರ್ಚ್ 20ರ ಶುಕ್ರವಾರದಂದು ಒಂದು ದಿನ ರಜೆ ಹಾಕಿದರೆ, ಸತತ 4 ದಿನಗಳ ಕಾಲ ಪ್ರವಾಸ ಅಥವಾ ವಿಶ್ರಾಂತಿಗೆ ಸಮಯ ಸಿಗಲಿದೆ.
-
ಎರಡನೇ ಸರಣಿ ರಜೆ: ಮಾರ್ಚ್ 28 ಮತ್ತು 29 ವಾರಾಂತ್ಯದ ರಜೆಗಳಾಗಿವೆ. ಮಾರ್ಚ್ 31ರ ಮಂಗಳವಾರ ಮಹಾವೀರ ಜಯಂತಿ ರಜೆ ಇದೆ. ನೌಕರರು ಮಾರ್ಚ್ 30ರ ಸೋಮವಾರ ಒಂದು ದಿನ ರಜೆ ಮಂಜೂರು ಮಾಡಿಸಿಕೊಂಡರೆ, ಮತ್ತೆ ಸತತ 4 ದಿನಗಳ ರಜೆ ನಿಮ್ಮದಾಗಲಿದೆ.
ಸಾರ್ವತ್ರಿಕ ರಜೆಗಳು
ಕರ್ನಾಟಕ ಸರ್ಕಾರದ ಅಧಿಕೃತ ಪಟ್ಟಿಯ ಪ್ರಕಾರ ಮಾರ್ಚ್‌ನಲ್ಲಿ 3 ದಿನಗಳು ಮಾತ್ರ ಸಾರ್ವತ್ರಿಕ ರಜೆಗಳಿವೆ. ಅವುಗಳೆಂದರೆ ಯುಗಾದಿ (ಮಾ.19), ರಂಜಾನ್ (ಮಾ.21), ಮತ್ತು ಮಹಾವೀರ ಜಯಂತಿ (ಮಾ.31). ಬ್ಯಾಂಕ್ ಗ್ರಾಹಕರು ತಮ್ಮ ಹಣಕಾಸಿನ ವ್ಯವಹಾರಗಳನ್ನು ಈ ರಜೆಗಳ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಯೋಜಿಸುವುದು ಉತ್ತಮ.





