ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು ದೇಶಾದ್ಯಂತ ಭರ್ಜರಿಯಾಗಿ ನಡೆಯುತ್ತಿದ್ದು, ಹಲವು ವರ್ಷಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ದೇಶಿಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿದಿರುವುದು ಅಭಿಮಾನಿಗಳಿಗೆ ವಿಶೇಷ ಸಂಭ್ರಮ ತಂದಿದೆ. ಈ ನಡುವೆ ಬೆಂಗಳೂರಿನಲ್ಲಿ ನಡೆದ ಪಂದ್ಯವೊಂದರಲ್ಲಿ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಆಂಧ್ರ ಪ್ರದೇಶ ಮತ್ತು ದೆಹಲಿ ತಂಡಗಳ ನಡುವೆ ನಡೆದ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದಾರೆ.. ದೆಹಲಿ ತಂಡದ ಪರವಾಗಿ ವಿಕೆಟ್‌ಕೀಪರ್ ರಿಷಭ್ ಪಂತ್ ನಾಯಕತ್ವದಲ್ಲಿ ಆಡಿದ ಕೊಹ್ಲಿ, ಹತ್ತು ವರ್ಷಗಳ ಬಳಿಕ ದೇಶಿಯ ಕ್ರಿಕೆಟ್‌ಗೆ ಮರಳಿದ್ದು, ಈ ಪಂದ್ಯ ಅಭಿಮಾನಿಗಳಿಗೆ ಖುಷಿ ತಂದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರ ಪ್ರದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 299 ರನ್‌ಗಳ ಬೃಹತ್ ಟಾರ್ಗೆಟ್‌ನ್ನು ದೆಹಲಿಗೆ ನೀಡಿತ್ತು. ಆಂಧ್ರ ಪರವಾಗಿ ರಿಕಿ ಭುಯಿ ಅದ್ಭುತ ಶತಕ ಬಾರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
300 ರನ್‌ಗಳ ಗುರಿ ಬೆನ್ನಟ್ಟಲು ಕಣಕ್ಕಿಳಿದ ದೆಹಲಿ ತಂಡಕ್ಕೆ ವಿರಾಟ್ ಕೊಹ್ಲಿ ಪ್ರಮುಖ ಆಸರೆಯಾಗಿದ್ದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಕೊಹ್ಲಿ, ತಮ್ಮ ಕ್ಲಾಸ್ ಮತ್ತು ಅನುಭವವನ್ನು ಪ್ರದರ್ಶಿಸಿದರು. 83 ಬಾಲ್‌ಗಳಲ್ಲಿ 100ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ ಕೊಹ್ಲಿ, 10 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳ ಮೂಲಕ ಶತಕ ಪೂರೈಸಿದರು.
ಕೊಹ್ಲಿಗೆ ಉತ್ತಮ ಸಾಥ್ ನೀಡಿದ ನಿತೀಶ್ ರಾಣಾ ಅರ್ಧಶತಕ ಬಾರಿಸಿ ದೆಹಲಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಈ ಜೋಡಿಯ ಜೊತೆಯಾಟ ಪಂದ್ಯವನ್ನು ಸಂಪೂರ್ಣವಾಗಿ ದೆಹಲಿಯ ಪರ ತಿರುಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಆಡುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಅಭಿಮಾನಿಗಳು ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದತ್ತ ಹರಿದುಬಂದಿದ್ದು, ಆದರೆ ಭದ್ರತಾ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಎಂಟ್ರಿ ನಿರ್ಬಂಧಿಸಲಾಗಿತ್ತು. ಇದರಿಂದ ನಿರಾಶರಾದ ಕೆಲ ಅಭಿಮಾನಿಗಳು, ಕೊಹ್ಲಿ ಬ್ಯಾಟಿಂಗ್‌ನ್ನು ಕಣ್ತುಂಬಿಕೊಳ್ಳಲು ಮೈದಾನದ ಪಕ್ಕದ ಮರಗಳ ಮೇಲೆ ಕುಳಿತು ಪಂದ್ಯ ವೀಕ್ಷಿಸಿದ ದೃಶ್ಯಗಳು ಎಲ್ಲರ ಗಮನ ಸೆಳೆದವು.





