ಬೆಂಗಳೂರು: ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿದ್ದರೂ, ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಸೌರಾಷ್ಟ್ರ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿತ್ತು. ಕೊನೆಯ ಓವರ್‌ಗಳ ತನಕ ಕುತೂಹಲ ಮೂಡಿಸಿದ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸೌರಾಷ್ಟ್ರ ತಂಡ, ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಭರ್ಜರಿ 320 ರನ್‌ಗಳನ್ನು ಕಲೆಹಾಕಿತ್ತು. ತಂಡದ ಪರ ವಿಶ್ವರಾಜ್ ಜಡೇಜಾ ಅದ್ಭುತ ಶತಕ (115 ರನ್) ಬಾರಿಸಿ ಆಧಾರ ಸ್ಥಂಭವಾಗಿದ್ದರು. ಅವರ ಜೊತೆ ರುಚಿತ್ ಅಹಿರ್ 95 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಕಾರದಿಂದ ಸೌರಾಷ್ಟ್ರ, ಡೆಲ್ಲಿಗೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.
320 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡ ಆರಂಭದಲ್ಲೇ ಒತ್ತಡಕ್ಕೆ ಒಳಗಾಯಿತು. ಪ್ರಿಯಾಂಶ್ ಆರ್ಯ 78 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ್ದು, ತೇಜಸ್ವಿ 53 ರನ್‌ಗಳ ಮಹತ್ವದ ಅರ್ಧಶತಕ ಬಾರಿಸಿ ಮಧ್ಯಕ್ರಮಾಂಕದಲ್ಲಿ ಸ್ಥಿರತೆ ತಂದರು.
ಹರ್ಷ್ ತ್ಯಾಗಿ 49 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಅಂತಿಮ ಹಂತದಲ್ಲಿ ನವದೀಪ್ ಸೈನಿ 29 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆಲ್ಲಿ 48.5 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗುರಿ ತಲುಪಿದ್ದು, ಈ ಪಂದ್ಯವನ್ನು ಅತ್ಯಂತ ರೋಚಕವಾಗಿಸಿತು.
ನಾಯಕ ರಿಷಭ್ ಪಂತ್ ಮತ್ತೆ ನಿರಾಸೆ
ವಿರಾಟ್ ಕೊಹ್ಲಿ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದರಿಂದ, ಡೆಲ್ಲಿ ನಾಯಕ ರಿಷಭ್ ಪಂತ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಪಂತ್ (22 ರನ್) ಮತ್ತೆ ನಿರಾಸೆ ಮೂಡಿಸಿದರು. ನಿರ್ಣಾಯಕ ಸಂದರ್ಭದಲ್ಲೂ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು.
ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಪಂತ್ ಅವರ ಕಳಪೆ ಪ್ರದರ್ಶನವು ಆಯ್ಕೆ ಸಮಿತಿಯ ಗಮನ ಸೆಳೆಯುವಂತಾಗಿದೆ. ಹೀಗಾಗಿ ಪಂತ್ ಬದಲಿಗೆ ಇಶಾನ್ ಕಿಶನ್‌ಗೆ ಅವಕಾಶ ಸಿಗಬಹುದು ಎಂಬ ಊಹಾಪೋಹಗಳು ಜೋರಾಗಿವೆ. ಈಗಾಗಲೇ ಕನ್ನಡಿಗ ಕೆ.ಎಲ್. ರಾಹುಲ್ ಏಕದಿನ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಆಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ.
ಧ್ರುವ್ ಜುರೆಲ್ ಶತಕ: ಬರೋಡ ವಿರುದ್ಧ ಉತ್ತರ ಪ್ರದೇಶಕ್ಕೆ ಭರ್ಜರಿ ಜಯ
ಇನ್ನೊಂದು ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ, ಬರೋಡಾ ವಿರುದ್ಧ 54 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ, 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 369 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಧ್ರುವ್ ಜುರೆಲ್ 101 ಎಸೆತಗಳಲ್ಲಿ ಅಜೇಯ 160 ರನ್‌ಗಳನ್ನು ಬಾರಿಸಿ ಪಂದ್ಯಕ್ಕೆ ಹೊಸ ಮೆರುಗು ನೀಡಿದರು. ಅವರೊಂದಿಗೆ ರಿಂಕು ಸಿಂಗ್ 67 ಎಸೆತಗಳಲ್ಲಿ 63 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಅಭಿಷೇಕ್ ಗೋಸ್ವಾಮಿ 51 ರನ್ ಗಳಿಸಿದರೆ, ಪ್ರಶಾಂತ್ ವೀರ್ (35) ಹಾಗೂ ಆರ್ಯನ್ ಜುಯಲ್ (26) ಉಪಯುಕ್ತ ಕೊಡುಗೆ ನೀಡಿದರು.
ಗುರಿ ಬೆನ್ನತ್ತಿದ ಬರೋಡಾ ತಂಡ 315 ರನ್‌ಗಳಿಗೆ ಆಲೌಟ್ ಆಯಿತು. 77 ಎಸೆತಗಳಲ್ಲಿ 82 ರನ್ ಗಳಿಸಿದ ಕೃನಾಲ್ ಪಾಂಡ್ಯ ಟಾಪ್ ಸ್ಕೋರರ್ ಆಗಿ ಮಿಂಚಿದರು. ಶಾಶ್ವತ್ ರಾವತ್ (60), ವಿಷ್ಣು ಸೋಲಂಕಿ (43) ಮತ್ತು ಶೇತ್ (46) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನತ್ತ ಕರೆದೊಯ್ಯಲು ಸಾಧ್ಯವಾಗಲಿಲ್ಲ.





