ಅಯೋಗ್ಯ-2.. ಅಯೋಗ್ಯ ಬಂದ ಬರೋಬ್ಬರಿ 8 ವರ್ಷಗಳ ನಂತ್ರ ತೆರೆಗಪ್ಪಳಿಸಿದ ಅದರ ಸೀಕ್ವೆಲ್ ಮೂವಿ. ಒನ್ಸ್ ಅಗೈನ್ ರಚಿತಾ ರಾಮ್-ಸತೀಶ್ ಜೋಡಿ ಮೋಡಿ ಮಾಡಿದೆ. ಹಾಗಾದ್ರೆ ಸಿನಿಮಾದ ಕಥೆ ಏನು..? ಆರ್ಟಿಸ್ಟ್‌ಗಳ ಪರ್ಫಾಮೆನ್ಸ್ ಹೇಗಿದೆ..? ಫಸ್ಟ್ ಡೇ ಫಸ್ಟ್ ಶೋ ನೋಡಿದ ಚಿತ್ರಪ್ರೇಮಿಗಳು ಏನಂದ್ರು..? ಅಯೋಗ್ಯ-3 ಬರುತ್ತಾ ಬರಲ್ವಾ..? ಬಚ್ಚಾ ಹಾಗೂ ಬಚ್ಚೇಗೌಡರ ಕಾಳಗದ ಹಿಂದಿನ ಅಸಲಿ ಗುಟ್ಟೇನು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿರೋ ಡಿಟೈಲ್ಡ್ ರಿವ್ಯೂ ರಿಪೋರ್ಟ್‌ನಲ್ಲಿದೆ.
ತಾರಾಗಣ: ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್, ರವಿಚಂದ್ರನ್, ದೇವರಾಜ್, ಶಿವರಾಜ್ ಕೆ ಆರ್ ಪೇಟೆ, ಗಿರಿ, ಮಂಜು ಪಾವಗಡ, ಸಾಧು ಕೋಕಿಲ, ತಬಲಾ ನಾಣಿ, ಸುಂದರ್‌ರಾಜ್ ಮುಂತಾದವರು.
ಅಯೋಗ್ಯ ಚಿತ್ರದಲ್ಲಿ ಒಂದೇ ಒಂದು ವೋಟ್‌ನಿಂದ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಗೆದ್ದಿದ್ದ ಸಿದ್ದೇಗೌಡ, ಇಲ್ಲಿ ಒನ್ಸ್ ಅಗೈನ್ ಬಚ್ಚೇಗೌಡ ಜೊತೆ ಕಾಳಗಕ್ಕೆ ಇಳಿಯುವಂತಾಗುತ್ತೆ. ಅದಕ್ಕೆ ಕಾರಣ ಮಾರಗೌಡನಹಳ್ಳಿಯನ್ನ ಉದ್ಧಾರ ಮಾಡೋಕೆ. ಹೌದು.. ಗ್ರಾಮ ಪಂಚಾಯ್ತಿ ಅಧ್ಯಕ್ಷನಾದ್ರೆ ಮಾತ್ರ ಸರ್ಕಾರದಿಂದ ಬರೋ ಅನುದಾನಗಳನ್ನ ಗ್ರಾಮೀಣಾಭಿವೃದ್ಧಿಗೆ ಬಳಸಬಹುದು ಅನ್ನೋ ಉದ್ದೇಶದಿಂದ ಅಧ್ಯಕ್ಷನಾಗೋ ಕನಸು ಕಾಣ್ತಾನೆ. ಅದಕ್ಕೆ ಖಳನಟ ಬಚ್ಚೇಗೌಡ ಆಡೋ ಗೇಮ್ ಎಂಥದ್ದು..? ಹಣ, ಅಧಿಕಾರ ಇಲ್ಲದೇ ಇರೋ ಸಿದ್ದೇಗೌಡನನ್ನ ಬಿಟ್ಟು ತವರಿಗೆ ತೆರಳುವ ನಾಯಕನಟಿ ನಂದಿನಿ, ಪಂಚಾಯ್ತಿ ಅಧ್ಯಕ್ಷನ ಕನಸು ಕಾಣೋ ಸಿದ್ದೇಗೌಡಗೆ ಎಂಎಲ್‌ಎ ಟಿಕೆಟ್ ಕೊಡೋಕೆ ಬರುವ ರಾಷ್ಟ್ರೀಯ ಪಕ್ಷ. ಸಿದ್ದೇಗೌಡನ ಕಷ್ಟ ಸುಖಗಳಿಗೆ ಜೊತೆ ನಿಲ್ಲೋ ಬೆಣ್ಣೆ, ಮಟನ್‌ನಂತಹ ಆಪ್ತಮಿತ್ರರು.. ಹೀಗೆ ಕಥೆ ಬಹಳ ಸೊಗಸಾಗಿ ಸಾಗುತ್ತೆ.
ಅದರ ನಡುವೆ ಸಿದ್ದೇಗೌಡಗೆ ತನ್ನ ತಂದೆ ಯಾರು..? ಯಾಕೆ ಆತ ದೂರ ಉಳಿದಿದ್ದಾನೆ ಅನ್ನೋದಕ್ಕೆ ಉತ್ತರ ಬೇಕಿರುತ್ತೆ. ಅದು ಸಿಗುತ್ತಾ ಇಲ್ವಾ..? ಸಿದ್ದೇಗೌಡ ನಿಜಕ್ಕೂ ಪಂಚಾಯ್ತಿ ಅಧ್ಯಕ್ಷ ಆಗ್ತಾನಾ..? ಎಂಎಲ್‌ಎ ಟಿಕೆಟ್ ಕೊಟ್ರೆ ಎಂಎಲ್‌ಎ ಆಗಿಬಿಡ್ತಾರಾ..? ನಂದಿನಿ ಮನೆಗೆ ವಾಪಸ್ ಬರ್ತಾರಾ ಇಲ್ವಾ ಅನ್ನೋದೇ ಅಯೋಗ್ಯ-2 ಚಿತ್ರದ ಒನ್‌ಲೈನ್ ಸ್ಟೋರಿ.
- ಅಯೋಗ್ಯ-2 ಆರ್ಟಿಸ್ಟ್ ಪರ್ಫಾಮೆನ್ಸ್
- ‘ಅಯೋಗ್ಯ’ನಾಗಿ ಸತೀಶ್ ಆಲ್‌ರೌಂಡ್ ಪರ್ಫಾಮೆನ್ಸ್
- ರಚ್ಚು 100% ಬೆಲ್ಲದಚ್ಚು.. ಆಲ್‌ಟೈಂ ಮುದ್ದು ಪುಟ್ಟಲಕ್ಷ್ಮೀ..!
ನಟ ಸತೀಶ್ ಅವರಿಗೆ ಜನ ಸುಮ್ಮನೆ ಅಭಿನಯ ಚತುರ ಬಿರುದು ನೀಡಿಲ್ಲ. ಕಾಮಿಡಿ, ಎಮೋಷನ್ಸ್, ಫೈಟ್ಸ್, ಡ್ಯಾನ್ಸ್.. ಹೀಗೆ ಎಲ್ಲಾ ಆ್ಯಂಗಲ್‌ನಲ್ಲಿ ಔಟ್‌ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ಸತೀಶ್. ಹೌದು.. ತಾನೊಬ್ಬ ಸೀದಾಸಾದಾ ಹಳ್ಳಿ ಹೈದನಾದ್ರೂ, ಬೆಣ್ಣೆ-ಮಟನ್ ಅಂದ್ರೆ ಗಿರಿ-ಶಿವರಾಜ್ ಕೆಆರ್ ಪೇಟೆ ಫ್ರೆಂಡ್ಸ್ ಜೊತೆಗೂಡಿ ಯುವ ಸಮುದಾಯವನ್ನ ಪ್ರತಿನಿಧಿಸಿದ್ದಾರೆ. ಟಿಪಿಕಲ್ ಹಳ್ಳಿಯೊಂದರ ಲೋಕಲ್ ಪಾಲಿಟಿಕ್ಸ್, ಆ ಹಳ್ಳಿ ಸೊಗಡು-ಸೊಬಗಿಗೆ ಪೂರಕವಾಗಿ ಸಿದ್ದೇಗೌಡನಾಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್.. ಅಕ್ಷರಶಃ ಮುದ್ ಮುದ್ದು ಪುಟ್ಟಲಕ್ಷ್ಮೀ. ಹೌದು.. ರಚ್ಚು ಹಂಡ್ರೆಡ್ ಪರ್ಸೆಂಟ್ ಬೆಲ್ಲದಚ್ಚು. ಸದಾ ಸೀರೆಯಲ್ಲಿ ಮಿಂಚೋ ಈ ಚೆಲುವೆ, ಸಿದ್ದೇಗೌಡನ ಪತ್ನಿ ನಂದಿನಿಯಾಗಿ ಎಲ್ಲರ ಮನಸಲ್ಲಿ ಉಳಿಯುತ್ತಾರೆ. ಎಲೆಕ್ಷನ್ ಆಫೀಸರ್ ಆಗಿ, ಜೀವನದಲ್ಲಿ ಸಂತಾನಕ್ಕಿಂತ ವರಮಾನ ಮುಖ್ಯ ಅನ್ನೋದನ್ನ ಗ್ರಾಮೀಣ ಹೆಣ್ಣು ಮಕ್ಕಳ ಧ್ವನಿಯಾಗಿ ಕಾಣಿಸಿಕೊಂಡಿದ್ದಾರೆ.
- ಬಚ್ಚೇಗೌಡನಾಗಿ ರವಿಶಂಕರ್ ವಿಲನ್ ಖದರ್..!
- ಬೆಣ್ಣೆ-ಮಟನ್ ಗಿರಿ-ಶಿವು ಸ್ನೇಹಲೋಕ ಸೂಪರ್
- ರಾಗಿಭಾಯ್ ಸಾಧು ರಂಗು.. ಪ್ರಜ್ಞಾ ಗ್ಲಾಮರ್ ಗುಂಗು
ಯೆಸ್.. ಆರ್ಮುಗಂ ರವಿಶಂಕರ್ ವಿಲನ್ ಖದರ್ ಹಾಗೂ ಕಾಮಿಡಿ ಟೈಂ ಮಸ್ತ್ ಮಜಾ ಕೊಡಲಿದೆ. ಬಚ್ಚೇಗೌಡನ ಖದರ್ ತೋರುವ ಮೂಲಕ ಚಿತ್ರಕ್ಕೆ ಪ್ರಮುಖ ಪಿಲ್ಲರ್ ಆಗ್ತಾರೆ ರವಿಶಂಕರ್. ಇನ್ನೂ ಬೆಣ್ಣೆ ಹಾಗೂ ಮಟನ್ ಪಾತ್ರಗಳಲ್ಲಿ ಗಿರಿ ಹಾಗೂ ಶಿವರಾಜ್ ಕೆಆರ್ ಪೇಟೆ, ಸತೀಶ್ ಜೊತೆ ಜೊತೆಗೆ ಓಪನಿಂಗ್‌ನಿಂದ ಕ್ಲೈಮ್ಯಾಕ್ಸ್ ತನಕ ಹಾಸ್ಯದ ಕಚಗುಳಿ ಇಡುತ್ತಲೇ, ಸ್ನೇಹದ ಮಹತ್ವದ ಸಾರುವ ಕಾರ್ಯ ಮಾಡಿದ್ದಾರೆ. ಮಂಜು ಪಾವಗಡ ಕುಡುಕನಾಗಿ ನಗಿಸೋದ್ರ ಜೊತೆ ಅಲ್ಲಲ್ಲಿ ಕುಡಿಯದೇ ಯಾಮಾರ್ತಿರೋ ಜನರ ಕಣ್ತೆರೆಸೋ ಕಾರ್ಯ ಮಾಡಿದ್ದಾರೆ. ತಬಲಾ ನಾಣಿ ಡುಯೆಲ್ ಶೇಡ್ ರೋಲ್ ಸಖತ್ ಸರ್‌ಪ್ರೈಸ್ ಕೊಡಲಿದೆ.
ಇನ್ನೂ ಸಾಧುಕೋಕಿಲ ರಾಗಿಭಾಯ್ ಆಗಿ ಯಶ್ ಕೆಜಿಎಫ್ ರಾಕಿಭಾಯ್ ಸ್ಪೂಫ್ ನೋಡುಗರನ್ನ ನಕ್ಕು ನಲಿಸುತ್ತೆ. ಪ್ರಜ್ಞಾ ಗ್ಲಾಮರಸ್ ಆಗಿರೋ ಮಿಲ್ಕಿ ಬ್ಯೂಟಿ ಸಾಂಗ್ ನೋಡುಗರ ಮನಸ್ಸನ್ನ ಹಗುರಾಗಿಸುತ್ತೆ. ಸುಂದರ್ ರಾಜ್ ಕೂಡ ನಾಯಕನಟಿ ರಚಿತಾ ತಂದೆ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
- ರವಿಚಂದ್ರನ್ ಹಾಗೂ ದೇವರಾಜ್ ಸರ್‌ಪ್ರೈಸ್ ಎಂಟ್ರಿ
ಕ್ರೇಜಿಸ್ಟಾರ್ ರವಿಚಂದ್ರನ್ ಅಯೋಗ್ಯ-2 ಚಿತ್ರದ ಬೈರೇಗೌಡ ರೋಲ್‌ನಲ್ಲಿ ಕಾಣಸಿಗಲಿದ್ದು, ಅವ್ರ ಗೆಸ್ಟ್ ಅಪಿಯರೆನ್ಸ್ ಮಜಾ ಕೊಡಲಿದೆ. ಕ್ಲೈಮ್ಯಾಕ್ಸ್‌ನಲ್ಲಿ ಅವರು ಬರೀ ಫೈಟ್ ಮಾಡೋಕಷ್ಟೇ ಅಲ್ಲ, ಸಂದೇಶ ಕೂಡ ಕೊಡ್ತಾರೆ. ಅಲ್ಲದೆ, ಡೈನಾಮಿಕ್ ಹೀರೋ ದೇವರಾಜ್ ಭಾರತ್ ರೈತರ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ದಾಸ್ ಪಾತ್ರದಲ್ಲಿ ಕಾಣಸಿಗ್ತಾರೆ. ಸಿದ್ದೇಗೌಡಗೆ ಶಾಸಕ ಟಿಕೆಟ್ ಕೊಡೋಕೆ ಮಾರಗೌಡನಹಳ್ಳಿಗೇ ಹುಡುಕಿಕೊಂಡು ಬರುವ ಪಾತ್ರ ಇಂಟರೆಸ್ಟಿಂಗ್ ಆಗಿದೆ.
ಅಯೋಗ್ಯ-2 ಪ್ಲಸ್ ಪಾಯಿಂಟ್ಸ್
- ಗ್ರಾಮೀಣ ಸೊಗಡಿನ ಕಥೆ
- ಮಹೇಶ್ ನಿರ್ದೇಶನ & ನಿರೂಪಣೆ
- ಸತೀಶ್, ರಚಿತಾ, ರವಿಶಂಕರ್, ಸಾಧು, ಗಿರಿ, ಶಿವು ನಟನೆ
- ಅರ್ಜುನ್ ಜನ್ಯ ಸಂಗೀತ
- ವಾಸ್ತವಕ್ಕೆ ಹತ್ತಿರದ ದೃಶ್ಯಗಳು
- ಹಾಸ್ಯ
- ಮಾಸ್ತಿ ಸಂಭಾಷಣೆ
- ಸಾಮಾಜಿಕ ಸಂದೇಶ
ಅಯೋಗ್ಯ-2 ಮೈನಸ್ ಪಾಯಿಂಟ್ಸ್
ಮೊದಲಾರ್ಧಕ್ಕಿಂತ ದ್ವಿತಿಯಾರ್ಧ ಕೊಂಚ ಲ್ಯಾಗ್ ಅನಿಸಲಿದೆ. ಫಸ್ಟ್ ಹಾಫ್ ಸಿನಿಮಾದಷ್ಟೇ ಸೆಕೆಂಡ್ ಹಾಫ್ ಕೂಡ ಕ್ರಿಸ್ಪಿಯಾಗಿ ಮಾಡಬೇಕಿತ್ತು. ಇನ್ನೂ ಅಯೋಗ್ಯ ಚಿತ್ರಕ್ಕೆ ಹೋಲಿಸಿದ್ರೆ ಇದರ ಹಾಡುಗಳು ಕೊಂಚ ಸಪ್ಪೆ ಅನಿಸಲಿವೆ. ಅರ್ಜುನ್ ಜನ್ಯ ಈ ವಿಚಾರದಲ್ಲಿ ಇನ್ನೊಂದಷ್ಟು ಎಫರ್ಟ್ ಹಾಕಬಹುದಿತ್ತು ಅನ್ನೋ ಭಾವ ಬರಲಿದೆ. ಅದರ ಹೊರತಾಗಿ ಸಿನಿಮಾ ಕಂಪ್ಲೀಟ್ ಫನ್ ವಿತ್ ಎಮೋಷನಲ್ ರೈಡ್ ಅಂದ್ರೆ ತಪ್ಪಾಗಲ್ಲ.
ಅಯೋಗ್ಯ-2ಗೆ ಗ್ಯಾರಂಟಿ ರೇಟಿಂಗ್: 3/5
ಅಯೋಗ್ಯ-2 ಫೈನಲ್ ಸ್ಟೇಟ್ಮೆಂಟ್:
ನಿರ್ದೇಶಕ ಮಹೇಶ್ ಕುಮಾರ್ ಅಯೋಗ್ಯ ಬಳಿಕ ಅದರ ಸೀಕ್ವೆಲ್‌ನ ಕೂಡ ಅಷ್ಟೇ ಅಚ್ಚುಕಟ್ಟಾಗಿ ಕಟ್ಟೋದ್ರಲ್ಲಿ ಯಶಸ್ವಿ ಆಗಿದ್ದಾರೆ. ಎಲ್ಲಿ ಹಾಸ್ಯ, ಎಲ್ಲಿ ಎಮೋಷನಲ್ ಸೀನ್ಸ್ ಹಾಗೂ ಎಲ್ಲಿ ಹಾಡು, ಫೈಟ್‌ನ ಇಡಬೇಕು ಅನ್ನೋದು ಚೆನ್ನಾಗಿ ಅರಿತಿದ್ದಾರೆ. ಗ್ರಾಮೀಣ ಸೊಗಡು, ಸೊಬಗನ್ನ ಜನಕ್ಕೆ ಉಣಬಡಿಸೋ ಕಲೆಯಲ್ಲಿ ಸಾಕಷ್ಟು ಮಾಗಿದ್ದಾರೆ. ಹಾಗಾಗಿ ಅಯೋಗ್ಯ-2 ಕೂಡ ಜನರ ಮೆಚ್ಚುಗೆಗೆ ಪಾತ್ರವಾಗ್ತಿದೆ. ನಿರ್ಮಾಪಕ ಮುನೇಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅವ್ರ ಸಿನಿಮೋತ್ಸಾಹ ಹಾಗೂ ಪ್ರೊಡಕ್ಷನ್ ವ್ಯಾಲ್ಯೂಸ್ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತವೆ. ಪಂಚಾಯ್ತಿ ಮಟ್ಟದ ಚುನಾವಣೆ, ರೆಸಾರ್ಟ್ ರಾಜಕಾರಣ, ಹಳ್ಳಿ ಜನರ ಸೈಕಾಲಜಿ, ಸ್ನೇಹ ಸಂಬಂಧಗಳ ವ್ಯಾಲ್ಯೂ.. ಹೀಗೆ ಸಾಕಷ್ಟು ವಿಚಾರಗಳು ಇಲ್ಲಿ ಗಮನ ಸೆಳೆಯಲಿವೆ. ಈಗಲೂ ಚಂಬು ಹಿಡಿದು ಬಯಲಿಗೆ ಹೋಗೋ ಅಂತಹ ಜನಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಮೆಸೇಜ್ ನೀಡಲಾಗಿದೆ. ಯಾವುದೇ ರಾಜಕಾರಣಕ್ಕೆ ಮುನ್ನುಡಿ ಬರೆಯೋದೇ ಗ್ರಾಮ ಪಂಚಾಯ್ತಿ. ಹಾಗಾಗಿ ಈ ಅಯೋಗ್ಯನ ಪಂಚಾಯ್ತಿಯನ್ನ ಮಿಸ್ ಮಾಡ್ಕೋಬೇಡಿ. ಯಾಕಂದ್ರೆ ನೀವು ಒಂದೊಳ್ಳೆ ಮನರಂಜನಾತ್ಮಕ ಹಾಗೂ ಯೋಗ್ಯ ಸಿನಿಮಾನ ಮಿಸ್ ಮಾಡ್ಕೋತೀರಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





