ಭಾರತೀಯ ಕ್ರಿಕೆಟ್‌ನ ಜನಪ್ರಿಯ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಬಹುಕಾಲದ ಗೆಳತಿ ಸೋಫಿ ಶೈನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ..
ಶಿಖರ್ ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೋಮ್ಯಾಂಟಿಕ್ ಫೋಟೊಗಳೊಂದಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಹಂಚಿಕೊಂಡ ನಗುಗಳಿಂದ ಹಂಚಿಕೊಂಡ ಕನಸುಗಳವರೆಗೆ… ನಾವು ಶಾಶ್ವತವಾಗಿ ಒಟ್ಟಿಗೆ ಇರುವುದನ್ನು ಆರಿಸಿಕೊಂಡಿದ್ದೇವೆ. ನಮ್ಮ ನಿಶ್ಚಿತಾರ್ಥದ ಈ ಕ್ಷಣಕ್ಕೆ ನಿಮ್ಮ ಪ್ರೀತಿ, ಆಶೀರ್ವಾದ ಹಾಗೂ ಶುಭಾಶಯಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್‌ಗೆ ‘ಶಿಖರ್ ಮತ್ತು ಸೋಫಿ’ ಎಂದು ಸಹಿ ಮಾಡಿದ್ದಾರೆ..
ಧವನ್ ಮತ್ತು ಸೋಫಿ ಶೈನ್ ಅವರ ನಿಶ್ಚಿತಾರ್ಥದ ಸುದ್ದಿ ಹೊರಬೀಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಸಹ ಆಟಗಾರರು ಶುಭಾಶಯಗಳ ಸುರಿಮಳೆಗೈದಿದ್ದಾರೆ. ಹಲವು ಮಂದಿ “ಗಬ್ಬರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಶಿಖರ್ ಧವನ್ ಅವರ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರ ಜೀವನದಲ್ಲಿ ಈ ಹೊಸ ಆರಂಭವು ಸಂತೋಷ, ಶಾಂತಿ ಮತ್ತು ಯಶಸ್ಸನ್ನು ತರುವಂತೆ ಆಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಸೋಫಿ ಶೈನ್, ಶಿಖರ್ ಧವನ್ ಇಬ್ಬರೂ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಬೆಂಬಲವಾಗಿ ನಿಂತಿದ್ದು, ಸಾರ್ವಜನಿಕವಾಗಿ ಹೆಚ್ಚು ಮಾತನಾಡದೇ ತಮ್ಮ ಸಂಬಂಧವನ್ನು ಗೌಪ್ಯವಾಗಿ ಉಳಿಸಿಕೊಂಡಿದ್ದರು. ಆದರೆ ಇದೀಗ ನಿಶ್ಚಿತಾರ್ಥದ ಘೋಷಣೆ ಮಾಡಿದ್ದಾರೆ..





