ಅಹಮದಾಬಾದ್: ಒಂದು ಕಾಲದಲ್ಲಿ ಕಳಪೆ ಫಾರ್ಮ್ನಿಂದಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ 11ನಿಂದಲೇ ಹೊರಗುಳಿದಿದ್ದ ಸಂಜು ಸ್ಯಾಮ್ಸನ್, ಈಗ ಟಿ20 ವಿಶ್ವಕಪ್ 2026ರ ಹೀರೊ ಆಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ 89 ರನ್ ಸಿಡಿಸಿದ ಸಂಜು, ಭಾರತಕ್ಕೆ ಬೃಹತ್ ಮೊತ್ತ ತಂದುಕೊಟ್ಟಿದ್ದಲ್ಲದೆ, ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯವರ ಐತಿಹಾಸಿಕ ದಾಖಲೆಗಳನ್ನು ಅಳಿಸಿಹಾಕಿದ್ದಾರೆ.
ಕೊಹ್ಲಿಯ 319 ರನ್ಗಳ ದಾಖಲೆ ಮುರಿದ ಸಂಜು
ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಈಗ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ 2014ರಲ್ಲಿ 319 ರನ್ ಗಳಿಸಿದ್ದರು. ಆದರೆ ಅದನ್ನ ಸಂಜು ಸ್ಯಾಮ್ಸನ್ ಈ ಬಾರಿ ಕೇವಲ 5 ಪಂದ್ಯಗಳಲ್ಲಿ 321 ರನ್ ಸಿಡಿಸಿದ್ದಾರೆ. 12 ವರ್ಷಗಳ ಹಿಂದೆ ಕಿಂಗ್ ಕೊಹ್ಲಿ ನಿರ್ಮಿಸಿದ್ದ ಈ ದಾಖಲೆಯನ್ನು ಸಂಜು ಈಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಸಂಜು ಅವರ ಸರಾಸರಿ 80.2 ರಷ್ಟಿದ್ದು, ಇದರಲ್ಲಿ 24 ಸಿಕ್ಸರ್ ಮತ್ತು 27 ಬೌಂಡರಿಗಳು ಸೇರಿವೆ.
ಹ್ಯಾಟ್ರಿಕ್ ಅರ್ಧಶತಕದ ಸಾಧನೆ
ನಾಕೌಟ್ ಪಂದ್ಯಗಳಲ್ಲಿ ಒತ್ತಡವನ್ನು ಮೆಟ್ಟಿ ನಿಂತ ಸಂಜು, ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಸೂಪರ್ 8 (ವೆಸ್ಟ್ ಇಂಡೀಸ್ ವಿರುದ್ಧ)ನಲ್ಲಿ 97 ರನ್. ಸೆಮಿಫೈನಲ್ನಲ್ಲಿ ಅರ್ಧಶತಕ. ಮತ್ತು ಫೈನಲ್ (ನ್ಯೂಜಿಲೆಂಡ್ ವಿರುದ್ಧ)ನಲ್ಲಿ 89 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿಶ್ವಕಪ್ನ ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ನಂತರ ಟಿ20 ವಿಶ್ವಕಪ್ನಲ್ಲಿ ಸತತ ಮೂರು ಅರ್ಧಶತಕ ಬಾರಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಆರಂಭಿಕನಾಗಿ ಕಣಕ್ಕಿಳಿದ ಸಂಜು, ಅಭಿಷೇಕ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್ಗೆ ಕೇವಲ 8 ಓವರ್ಗಳಲ್ಲಿ 98 ರನ್ಗಳ ಜೊತೆಯಾಟವಾಡಿದರು. ಅಭಿಷೇಕ್ ಬಿರುಗಾಳಿಯ ವೇಗದಲ್ಲಿ ಬ್ಯಾಟ್ ಬೀಸಿದರೆ, ಸಂಜು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡದ ಮೊತ್ತ 250ರ ಗಡಿ ದಾಟಲು ಪ್ರಮುಖನಾಗಿದ್ದಾನೆ.





