2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಲಖನೌದ ಎಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಇದರೊಂದಿಗೆ ಆತಿಥೇಯ ಲಖನೌ ತಂಡ ಮೊದಲ ಬ್ಯಾಟಿಂಗ್‌ಗೆ ಇಳಿದಿದೆ.
ಟಾಸ್ ಬಳಿಕ ಮಾತನಾಡಿದ ರಜತ್ ಪಾಟಿದಾರ್, ಎಕನಾ ಕ್ರಿಕೆಟ್ ಮೈದಾನದ ಪಿಚ್ ಕಪ್ಪು ಮಣ್ಣಿನಿಂದ ಕೂಡಿದ್ದು ನಿಧಾನಗತಿಯಾಗಿದೆ ಎಂದು ಹೇಳಿದರು. ಕಳೆದ ಕೆಲವು ಪಂದ್ಯಗಳಲ್ಲಿ ಇಲ್ಲಿ ಕಡಿಮೆ ಮೊತ್ತದ ಸ್ಕೋರ್‌ಗಳೇ ದಾಖಲಾಗಿರುವುದರಿಂದ ಮೊದಲು ಬೌಲಿಂಗ್ ಮಾಡುವುದು ಸೂಕ್ತ ಎಂದು ತಿಳಿಸಿದರು. ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಬಳಿಕ ಚೇಸ್ ಮಾಡುವ ತಂತ್ರದೊಂದಿಗೆ ಕಣಕ್ಕಿಳಿದಿದ್ದೇವೆ ಎಂದರು. ಜೊತೆಗೆ ಕಳೆದ ಪಂದ್ಯದಲ್ಲಿ ಆಡಿದ್ದ ಅದೇ ಆಡುವ ಬಳಗವನ್ನು ಮುಂದುವರಿಸಿರುವುದಾಗಿ ಸ್ಪಷ್ಟಪಡಿಸಿದರು.
ಇನ್ನೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಕಳೆದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಜೋಶ್ ಇಂಗ್ಲಿಸ್ ಗಾಯಗೊಂಡಿರುವ ಕಾರಣ ಅವರ ಬದಲಿಗೆ ಅರ್ಶಿನ್ ಕುಲಕರ್ಣಿ ಅವಕಾಶ ಪಡೆದಿದ್ದಾರೆ. ಮಣಿಮಾರನ್ ಸಿದ್ದಾರ್ಥ್ ಸ್ಥಾನಕ್ಕೆ ಶಹಬಾಝ್ ಅಹ್ಮದ್ ತಂಡ ಸೇರಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದ ವೇಗಿ ಮೊಹ್ಸಿನ್ ಖಾನ್‌ಗೆ ವಿಶ್ರಾಂತಿ ನೀಡಲಾಗಿದೆ ಎಂದು ನಾಯಕ ರಿಷಭ್ ಪಂತ್ ಟಾಸ್ ವೇಳೆ ಮಾಹಿತಿ ನೀಡಿದರು.
ಈ ಪಂದ್ಯ ಎರಡೂ ತಂಡಗಳಿಗೆ ಬಹಳ ಮಹತ್ವದ್ದಾಗಿದೆ. ಆರ್‌ಸಿಬಿ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿದ್ದರೂ, ಲಕ್ನೋ ವಿರುದ್ಧ ಜಯ ಸಾಧಿಸಿದರೆ 14 ಅಂಕಗಳೊಂದಿಗೆ ಪಾಸಿಟಿವ್ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಬೆಂಗಳೂರು ತಂಡಕ್ಕಿದೆ. ಹೀಗಾಗಿ ಪಾಟಿದಾರ್ ಪಡೆಗೆ ಇದು ನಿರ್ಣಾಯಕ ಪಂದ್ಯವಾಗಿದೆ.
ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ಹಾಗೂ ಜೇಕಬ್ ಬೆಥೆಲ್ ಮೇಲೆ ಬ್ಯಾಟಿಂಗ್ ಹೊಣೆಗಾರಿಕೆ ಇದ್ದರೆ, ಭುವನೇಶ್ವರ್ ಕುಮಾರ್, ಜೋಶ್ ಹೇಝಲ್‌ವುಡ್ ಹಾಗೂ ಸುಯಶ್ ಶರ್ಮಾ ಬೌಲಿಂಗ್ ದಾಳಿಗೆ ಬಲ ತುಂಬಲಿದ್ದಾರೆ.





