ಮುಲ್ಲನ್ಪುರ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಯುವ ಆಟಗಾರ ಕೂಪರ್ ಕೊನೊಲಿ ಅವರ ನೆರವಿನಿಂದ ಪಂಜಾಬ್ ಕಿಂಗ್ಸ್ ಗೆಲುವಿನ ನಗೆ ಬೀರಿದೆ.
ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ದುಕೊಂಡರು. ಪಂಜಾಬ್ ಬೌಲರ್‌ಗಳು ಗುಜರಾತ್ ಟೈಟಾನ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಸ್ಫೋಟಕ ಬ್ಯಾಟರ್ ಸಾಯಿ ಸುದರ್ಶನ್ ಕೇವಲ 13 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದ ಗುಜರಾತ್ ತಂಡಕ್ಕೆ ನಾಯಕ ಶುಭ್ಮನ್ ಗಿಲ್ ಮತ್ತು ಅನುಭವಿ ಜೋಸ್ ಬಟ್ಲರ್ ಆಸರೆಯಾದರು. ಗಿಲ್ 39 ರನ್ ಗಳಿಸಿ ಚಹಲ್ ಬಲೆಗೆ ಬಿದ್ದರೆ, ಬಟ್ಲರ್ 38 ರನ್ ಗಳಿಸಿ ನಿರ್ಗಮಿಸಿದರು. ಗ್ಲೆನ್ ಫಿಲಿಪ್ಸ್ (25) ಅಲ್ಪ ಕಾಣಿಕೆ ನೀಡಿದರೂ, ವಾಷಿಂಗ್ಟನ್ ಸುಂದರ್ (18) ಮತ್ತು ರಾಹುಲ್ ತೆವಾಟಿಯಾ (11) ರನ್ ಗಳಿಸಲು ಪರದಾಡಿದರು. ಶಾರುಖ್ ಖಾನ್ ಕೇವಲ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.
163 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಪ್ರಿಯಾಂಶ್ ಆರ್ಯ (7) ಅವರ ವಿಕೆಟ್ ಕಳೆದುಕೊಂಡಿತು. ಆದರೆ, ಪ್ರಭ್ ಸಿಮ್ರಾನ್ ಸಿಂಗ್ (37) ಮತ್ತು ಯುವ ಪ್ರತಿಭೆ ಕೂಪರ್ ಕೊನೊಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಪವರ್‌ಪ್ಲೇನಲ್ಲಿ 55 ರನ್ ತಂದುಕೊಟ್ಟರು. ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಇನಿಂಗ್ಸ್ ಆಡಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ನೆಹಾಲ್ ವಧೇರಾ, ಶಶಾಂಕ್ ಸಿಂಗ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಶೂನ್ಯಕ್ಕೆ ಔಟಾದರು. ಈ ವೇಳೆ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್ ನಡೆಸಿ ಗುಜರಾತ್‌ಗೆ ಮೇಲುಗೈ ತಂದುಕೊಟ್ಟರು.
ಆದರೆ, ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಕೂಪರ್ ಕೊನೊಲಿ ಏಕಾಂಗಿ ಹೋರಾಟ ನಡೆಸಿದರು. ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಒಟ್ಟಾರೆ 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 72 ರನ್ ಸಿಡಿಸಿದರು. ಈ ಸ್ಫೋಟಕ ಇನಿಂಗ್ಸ್‌ನ ನೆರವಿನಿಂದ ಪಂಜಾಬ್ ಕಿಂಗ್ಸ್ 19.1 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು.





