ಪಟ್ಟಾನಿ: ಫುಟ್ಬಾಲ್ ಪಂದ್ಯದ ಆರಂಭಕ್ಕೂ ಕೆಲವೇ ಕ್ಷಣಗಳ ಮುನ್ನ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಆಟಗಾರನೊಬ್ಬನ ಮೇಲೆ ಪಿಚ್ ರೋಲರ್ ಹರಿದ ಘಟನೆ ಥಾಯ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಲೈವ್ ಪ್ರಸಾರದ ವೇಳೆ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪಟ್ಟಾನಿ ಎಫ್‌ಸಿ ವಿರುದ್ಧದ ಲೀಗ್ ಪಂದ್ಯಕ್ಕಾಗಿ ಪಿಟಿ ಪ್ರಚೌಪ್ ತಂಡದ ಆಟಗಾರರು ಮೈದಾನದಲ್ಲಿ ವಾರ್ಮ್ಅಪ್ ನಡೆಸುತ್ತಿದ್ದರು. ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದ ಹಿನ್ನೆಲೆ ಎರಡೂ ತಂಡಗಳ ಆಟಗಾರರು ಲಘು ಅಭ್ಯಾಸದಲ್ಲಿ ತೊಡಗಿದ್ದರು. ಇದೇ ವೇಳೆ ಕ್ರೀಡಾಂಗಣದ ಸಿಬ್ಬಂದಿ ಪಂದ್ಯಕ್ಕೂ ಮುನ್ನ ಪಿಚ್‌ನ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು.
ಈ ಸಂದರ್ಭದಲ್ಲಿ ಪಿಟಿ ಪ್ರಚೌಪ್ ತಂಡದ ವಿಂಗರ್ ಆ್ಯಂಡ್ರೂಸ್ ಟೌನ್‌ಸೆಂಡ್ ಮೈದಾನದಲ್ಲಿ ವಾರ್ಮ್ಅಪ್ ಮಾಡುತ್ತಿದ್ದರು. ಇಂಗ್ಲೆಂಡ್‌ನ ಮಾಜಿ ಫುಟ್ಬಾಲ್ ಆಟಗಾರರಾಗಿರುವ ಟೌನ್‌ಸೆಂಡ್ ತಂಡದ ಪ್ರಮುಖ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಅವರು ಅಭ್ಯಾಸದಲ್ಲಿ ತೊಡಗಿದ್ದಾಗ ಹಿಂದಿನಿಂದ ಪಿಚ್ ರೋಲರ್ ವಾಹನ ಆಗಮಿಸಿದೆ.
ಪಿಚ್ ರೋಲರ್ ಮೈದಾನದ ಮೇಲ್ಮೈಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆಟಗಾರರು ಮೈದಾನದಲ್ಲಿ ವಾರ್ಮ್ಅಪ್ ಮಾಡುತ್ತಿದ್ದ ಸಂದರ್ಭದಲ್ಲಿ ರೋಲರ್ ಸಂಚರಿಸುತ್ತಿದ್ದರಿಂದ ಕ್ಷಣಾರ್ಧದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಟೌನ್‌ಸೆಂಡ್ ಅವರ ಕಾಲು ರೋಲರ್‌ನ ಕೆಳಗೆ ಸಿಲುಕಿದ ಪರಿಣಾಮ ಅವರು ನೆಲಕ್ಕೆ ಬಿದ್ದಿದ್ದಾರೆ.
ಅಷ್ಟರಲ್ಲೇ ಪಿಚ್ ರೋಲರ್ ಅವರ ದೇಹದ ಭಾಗದ ಮೇಲೆ ಹರಿದಿದೆ. ಘಟನೆ ಕಂಡು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದು ಕೂಗಿದ್ದಾರೆ. ಮೈದಾನದಲ್ಲಿದ್ದ ಆಟಗಾರರು ಹಾಗೂ ಸಿಬ್ಬಂದಿ ತಕ್ಷಣವೇ ಅಪಘಾತ ಸಂಭವಿಸಿದ ಸ್ಥಳದತ್ತ ಓಡಿಬಂದಿದ್ದಾರೆ. ರೋಲರ್ ಚಾಲನೆ ಮಾಡುತ್ತಿದ್ದ ಸಿಬ್ಬಂದಿಯೂ ಕೂಡಲೇ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾರೆ.
ಸಹ ಆಟಗಾರರು ಹಾಗೂ ಸಿಬ್ಬಂದಿ ಟೌನ್‌ಸೆಂಡ್ ಅವರನ್ನು ರಕ್ಷಿಸಿ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅಪಘಾತದಲ್ಲಿ ಅವರ ಕಾಲು ಮತ್ತು ಮೊಣಕಾಲಿನ ಭಾಗಕ್ಕೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿದೆ.
ಚಿಕಿತ್ಸೆ ಪಡೆದ ಬಳಿಕ ಟೌನ್‌ಸೆಂಡ್ ಅವರಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಅವರು ವಿಶ್ರಾಂತಿಗೆ ಒಪ್ಪದೇ ಪಂದ್ಯದಲ್ಲಿ ಆಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಆರಂಭಿಕ ಹಂತದಲ್ಲಿ ಮೈದಾನಕ್ಕೆ ಇಳಿಯಲು ಸಾಧ್ಯವಾಗದಿದ್ದರೂ, ಪಂದ್ಯವನ್ನು ಸಂಪೂರ್ಣವಾಗಿ ಕೈಬಿಡದೆ ತಂಡದ ಜೊತೆಗೇ ಉಳಿದಿದ್ದರು.
ಪಂದ್ಯದ ಅಂತಿಮ ಹಂತದಲ್ಲಿ ಟೌನ್‌ಸೆಂಡ್ ಅವರನ್ನು ಬದಲಿ ಆಟಗಾರನಾಗಿ ಮೈದಾನಕ್ಕೆ ಕಳುಹಿಸಲಾಗಿದೆ. 93ನೇ ನಿಮಿಷದಲ್ಲಿ ಅವರು ಮೈದಾನಕ್ಕಿಳಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಭರ್ಜರಿ ಪ್ರೋತ್ಸಾಹ ವ್ಯಕ್ತವಾಯಿತು. ಕೆಲವೇ ಸಮಯದ ಹಿಂದೆ ಅಪಘಾತಕ್ಕೀಡಾದ ಆಟಗಾರ ಮತ್ತೆ ಪಂದ್ಯದಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರ ಗಮನ ಸೆಳೆಯಿತು.
ಇನ್ನು ಪಂದ್ಯದಲ್ಲಿ ಪಿಟಿ ಪ್ರಚೌಪ್ ತಂಡ ಪಟ್ಟಾನಿ ಎಫ್‌ಸಿ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದೆ. ಟೌನ್‌ಸೆಂಡ್ ಅವರ ಅಪಘಾತದ ದೃಶ್ಯಗಳು ಲೈವ್ ಪ್ರಸಾರದ ವೇಳೆ ಸೆರೆಯಾಗಿರುವುದರಿಂದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.





