ಜಪಾನ್‌ನ ಐಚಿ-ನಗೋಯಾದಲ್ಲಿ ಬಹುನಿರೀಕ್ಷಿತ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಸೆಪ್ಟೆಂಬರ್ 19ರಂದು ಶನಿವಾರ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಜಪಾನ್‌ನ ಚಕ್ರವರ್ತಿ ನರುಹಿತೊ ಅವರು 20ನೇ ಏಷ್ಯನ್ ಗೇಮ್ಸ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು. ಇದರೊಂದಿಗೆ ಏಷ್ಯಾದ ವಿವಿಧ ರಾಷ್ಟ್ರಗಳ ಸುಮಾರು 11 ಸಾವಿರ ಕ್ರೀಡಾಪಟುಗಳ ಪದಕ ಬೇಟೆ ಆರಂಭವಾಗಿದೆ.
ನಗೋಯಾದ ಮಿಹುಜೊ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ದೇಶಗಳ ಕ್ರೀಡಾಪಟುಗಳು ತಮ್ಮ ರಾಷ್ಟ್ರಗಳ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದರು. ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಸೇರಿ ಕ್ರೀಡಾಪಟುಗಳನ್ನು ಸಂಭ್ರಮದಿಂದ ಸ್ವಾಗತಿಸಿದರು. ಸುಮಾರು 45 ದೇಶಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದು, ವಿವಿಧ ಸಂಸ್ಕೃತಿ ಮತ್ತು ಕ್ರೀಡಾ ಪರಂಪರೆಗಳ ಅನಾವರಣಕ್ಕೆ ವೇದಿಕೆಯಾಯಿತು.
ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಶುಭಾಶಯ
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಸುಮಾರು 500 ಭಾರತೀಯ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಭಾರತದ ಪ್ರತಿಯೊಬ್ಬ ಕ್ರೀಡಾಪಟುವೂ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಉತ್ಸಾಹದಿಂದ ಸಿದ್ಧತೆ ನಡೆಸಿದ್ದಾರೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ದೇಶವು ಭಾರತೀಯ ಕ್ರೀಡಾಪಟುಗಳ ಬಗ್ಗೆ ಹೆಮ್ಮೆಪಡುತ್ತಿದೆ ಎಂದು ಹೇಳಿರುವ ಅವರು, ಎಲ್ಲರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.
ಮನು ಭಾಕರ್, ಪವನ್ ಸೆಹ್ರಾವತ್ ಧ್ವಜಾದಾರಿಗಳು
ಉದ್ಘಾಟನಾ ಸಮಾರಂಭದಲ್ಲಿ ಭಾರತದ ತಂಡವನ್ನು ಶೂಟಿಂಗ್ ತಾರೆ ಮನು ಭಾಕರ್ ಹಾಗೂ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಮುನ್ನಡೆಸಿದರು. ಭಾರತೀಯ ತಂಡದ ಧ್ವಜವನ್ನು ಹಿಡಿದು ಕ್ರೀಡಾಂಗಣದಲ್ಲಿ ಸಾಗಿದ ಇಬ್ಬರು ಕ್ರೀಡಾಪಟುಗಳು ದೇಶದ ತಂಡವನ್ನು ಪ್ರತಿನಿಧಿಸಿದರು.
ಈಗಾಗಲೇ ಆರಂಭವಾದ ಭಾರತದ ಅಭಿಯಾನ
ಅಧಿಕೃತ ಉದ್ಘಾಟನೆಗೂ ಮುನ್ನವೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕೆಲವು ಸ್ಪರ್ಧೆಗಳು ಆರಂಭಗೊಂಡಿವೆ. ಮಹಿಳಾ ಕ್ರಿಕೆಟ್ ತಂಡ ಸೆಪ್ಟೆಂಬರ್ 18ರಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ಭಾರತ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.
ಇದೇ ವೇಳೆ ಮಹಿಳಾ ಟೆಕ್ಬಾಲ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕ್ವಿಮ್ಸಿ ಡಿ’ಸೋಜಾ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಅವರು ಇದೀಗ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್, ಶೂಟಿಂಗ್, ಬ್ಯಾಡ್ಮಿಂಟನ್, ಕಬಡ್ಡಿ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಗಳು ನಡೆಯಲಿದ್ದು, ದೇಶದ ಕ್ರೀಡಾಭಿಮಾನಿಗಳ ಗಮನ ಏಷ್ಯನ್ ಗೇಮ್ಸ್‌ನತ್ತ ನೆಟ್ಟಿದೆ.





