ಸಂಖ್ಯಾಶಾಸ್ತ್ರ ಪ್ರಕಾರ ಪ್ರತಿಯೊಬ್ಬರ ಜನ್ಮಸಂಖ್ಯೆ ಅವರ ದಿನದ ಸೌಭಾಗ್ಯವನ್ನು ನಿರ್ಧರಿಸುತ್ತದೆ. ನವೆಂಬರ್ 7ರ ಶುಕ್ರವಾರದಂದು ಯಾವ ಜನ್ಮಸಂಖ್ಯೆಗೆ ಯಾವ ರೀತಿಯ ಫಲಗಳು ದೊರೆಯಲಿವೆ ಎಂಬುದನ್ನು ನೋಡೋಣ. ನಿಮ್ಮ ಜನ್ಮದಿನದ ತಾರೀಖಿನ ಸಂಖ್ಯೆಯನ್ನು ಸೇರಿಸಿ ಒಂದು ಅಂಕೆಗೆ ಬರುವ ಸಂಖ್ಯೆಯೇ ನಿಮ್ಮ ಜನ್ಮಸಂಖ್ಯೆ.
ಜನ್ಮಸಂಖ್ಯೆ 1 (1, 10, 19, 28)
ಮನೆಯಿಂದ ದೂರ ಇದ್ದವರು ಇಂದು ಮನೆಯ ನೆನಪಿನಲ್ಲಿ ತಲ್ಲೀನರಾಗುವ ಸಾಧ್ಯತೆ. ಕುಟುಂಬದ ಮೆಚ್ಚುಗೆಗೆ ಪಾತ್ರರಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನೆರೆಹೊರೆಯವರ ಜೊತೆ ಇದ್ದ ಅಸಮಾಧಾನ ಬಗೆಹರಿಯಲಿದೆ. ಹಣಕಾಸು ಕ್ಷೇತ್ರದವರಿಗೆ ಗುರಿ ಮುಟ್ಟುವ ದಾರಿ ಕಾಣಿಸಲಿದೆ.
ಜನ್ಮಸಂಖ್ಯೆ 2 (2, 11, 20, 29)
ಆರ್ಥಿಕ ಸ್ಥಿತಿಯ ಅಸ್ಥಿರತೆ ನಿಮಗೆ ಆತಂಕ ನೀಡಬಹುದು, ಆದರೆ ಹೊಸ ಯೋಜನೆಗಳ ಬಗ್ಗೆ ಯೋಚನೆ ಆರಂಭಿಸುವಿರಿ. ಫ್ರೀಲ್ಯಾನ್ಸರ್‌ಗಳು ತಮ್ಮ ಪರಿಶ್ರಮದ ಮೌಲ್ಯ ಕೇಳಲು ಧೈರ್ಯ ತೋರುವರು. ಸಣ್ಣ ವ್ಯವಹಾರ ಆರಂಭಿಸಲು ಪ್ರೇರಣೆ ಸಿಗಲಿದೆ. ಹಣಕಾಸು ಹೊಂದಾಣಿಕೆಯಲ್ಲಿ ಹೊಸ ಬೆಳಕು ಕಾಣಿಸಬಹುದು.
ಜನ್ಮಸಂಖ್ಯೆ 3 (3, 12, 21, 30)
ಗುಪ್ತವಾಗಿಟ್ಟ ವಿಚಾರ ಬಹಿರಂಗವಾಗುವ ಸಾಧ್ಯತೆ ಇದ್ದು, ಖ್ಯಾತಿಗೆ ಸ್ವಲ್ಪ ಧಕ್ಕೆಯಾಗಬಹುದು. ಸಾರ್ವಜನಿಕ ವಲಯದವರು ಎಚ್ಚರಿಕೆಯಿಂದ ನಡೆದುಕೊಳ್ಳಿ. ಕುಟುಂಬದಲ್ಲಿ ಆಸ್ತಿ ವಿವಾದಗಳ ಪರಿಹಾರದ ಕುರಿತು ಸಂಭಾಷಣೆ ಆರಂಭವಾಗಬಹುದು. ಹಳೆಯ ಉಳಿತಾಯ ಬಳಸಬೇಕಾದ ಸಂದರ್ಭ ಎದುರಾಗಬಹುದು.
ಜನ್ಮಸಂಖ್ಯೆ 4 (4, 13, 22, 31)
ನಿಮ್ಮ ಪ್ರಯತ್ನಗಳಿಗೆ ಇಂದು ಫಲ ಸಿಗುವ ದಿನ. ಮೇಲಧಿಕಾರಿಗಳ ಮೆಚ್ಚುಗೆ ದೊರೆಯಬಹುದು, ಹೊಸ ಜವಾಬ್ದಾರಿಗಳು ಬರುವುದು ಸಹ ಸಾಧ್ಯ. ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಸಿಗುವ ಸೂಚನೆ. ವಿದೇಶ ಪ್ರವಾಸ ಅಥವಾ ಹೊಸ ಯೋಜನೆಗೆ ಒಳ್ಳೆಯ ಸುಳಿವು ಸಿಗಬಹುದು. ಲ್ಯಾಂಡ್ ಡೆವಲಪ್‌ಮೆಂಟ್ ಉದ್ಯಮಿಗಳಿಗೆ ಸರ್ಕಾರದ ನೆರವು ದೊರೆಯುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 5 (5, 14, 23)
ಬಹಳ ಕಾಲದಿಂದ ಕಾಯುತ್ತಿದ್ದ ವಿಚಾರಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಹೊಸ ಸಂಪರ್ಕಗಳಿಂದ ಲಾಭವಾಗುವ ದಿನ. ಖರ್ಚಿನ ಮೇಲೆ ನಿಯಂತ್ರಣ ತರಬೇಕೆಂಬ ನಿರ್ಧಾರ ಕೈಗೊಳ್ಳುವಿರಿ. ತೀರ್ಥಯಾತ್ರೆ ಅಥವಾ ಹರಕೆ ತೀರಿಸುವ ಯೋಗ. ನಿಮ್ಮ ಅಭಿಪ್ರಾಯ ಮತ್ತು ಸಂಬಂಧಗಳಲ್ಲಿ ಬದಲಾವಣೆ ಮಾಡುವ ಯೋಚನೆ ಆರಂಭವಾಗುತ್ತದೆ.
ಜನ್ಮಸಂಖ್ಯೆ 6 (6, 15, 24)
ಸಣ್ಣ ತಪ್ಪಿಗೂ ಕ್ಷಮಿಸದ ಮನಸ್ಥಿತಿಯಿಂದ ವಾತಾವರಣ ಉದ್ವಿಗ್ನವಾಗಬಹುದು. ಆದರೂ ನಿಮ್ಮ ನೇರವಂತಿಕೆಯು ಗೌರವ ತರುತ್ತದೆ. ಕೃಷಿಕರಿಗೆ ಲಾಭದಾಯಕ ದಿನ, ಆದಾಯ ಹೆಚ್ಚಳದ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಉನ್ನತಿ, ವೇತನ ಹೆಚ್ಚಳದ ಸುಳಿವು. ನಿಮ್ಮ ನಿಷ್ಠೆ ಮತ್ತು ದೃಢತೆಯು ಎಲ್ಲರ ಮೆಚ್ಚುಗೆ ಪಡೆಯಲಿದೆ.
ಜನ್ಮಸಂಖ್ಯೆ 7 (7, 16, 25)
ಬ್ಯಾಂಕ್ ಅಥವಾ ಸಾಲ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ದೊರೆಯುವ ಸಾಧ್ಯತೆ. ಹೊಸ ವ್ಯಾಪಾರ ಅಥವಾ ಸಣ್ಣ ಹೂಡಿಕೆಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸೈಟ್ ಅಥವಾ ಫ್ಲ್ಯಾಟ್ ಖರೀದಿಯ ಚರ್ಚೆ ನಡೆಯಬಹುದು. ಹಣಕಾಸಿನ ಪ್ಲ್ಯಾನಿಂಗ್ ಬಗ್ಗೆ ಕುಟುಂಬದವರೊಂದಿಗೆ ಮಾತುಕತೆ ನಡೆಯಲಿದೆ.
ಜನ್ಮಸಂಖ್ಯೆ 8 (8, 17, 26)
ರಿಯಲ್ ಎಸ್ಟೇಟ್ ಅಥವಾ ಕಮಿಷನ್ ಆಧಾರಿತ ವ್ಯವಹಾರಗಳಲ್ಲಿ ಲಾಭದಾಯಕ ದಿನ. ಬಾಕಿ ಉಳಿದ ಹಣ ವಸೂಲಿ ಸಾಧ್ಯ. ಸಿಗುವ ಮಾಹಿತಿಯ ಸರಿಯಾದ ಬಳಕೆ ನಿಮ್ಮ ಯಶಸ್ಸಿಗೆ ದಾರಿ ಮಾಡುತ್ತದೆ. ನಿಮ್ಮ ಸಲಹೆಗಳು ಇತರರಿಗೆ ಸಹಾಯವಾಗುವ ಮೂಲಕ ಜನಪ್ರಿಯತೆ ಹೆಚ್ಚುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವ ಸ್ನೇಹಿತರಿಗೆ ನೆರವು ನೀಡುವ ಯೋಗ.
ಜನ್ಮಸಂಖ್ಯೆ 9 (9, 18, 27)
ಕೆಲಸ ಸುಲಭವೆಂದುಕೊಂಡು ಕೈ ಹಾಕಿದರೆ ವಿಳಂಬವಾಗಬಹುದು. ವಾಹನ ಚಾಲನೆ ವೇಳೆ ಎಚ್ಚರಿಕೆ ಅಗತ್ಯ. ಮಕ್ಕಳ ವರ್ತನೆ ಚಿಂತೆಗೆ ಕಾರಣವಾಗಬಹುದು. ಕೆಲಸದ ಡೆಡ್‌ಲೈನ್‌ಗಳ ಬಗ್ಗೆ ಜಾಗ್ರತೆ ಇರಲಿ. ಆಹಾರ ನಿಯಮ ಮುರಿದರೆ ನಂತರ ಪಶ್ಚಾತ್ತಾಪವಾಗಬಹುದು. ಗೃಹಿಣಿಯರು ಕೆಲಸದಲ್ಲಿ ಗುಣಮಟ್ಟ ಕಾಪಾಡಿ ಮುಗಿಸುವ ಪ್ರಯತ್ನ ಮಾಡಲಿ.





