ಗಣೇಶ ಚತುರ್ಥಿಯು ಹಿಂದೂ ಧರ್ಮದವರಿಗೆ ಬಹಳ ವಿಶೇಷವಾದ ಹಬ್ಬವಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಆಚರಿಸಲಾಗುವ ಈ ಹಬ್ಬವು ಗಣಪತಿಯ ಆರಾಧನೆಯೊಂದಿಗೆ ಸಂತೋಷ ಮತ್ತು ಭಕ್ತಿ, ಭಾವದಿಂದ ಎಲ್ಲರೂ ಸೇರಿ ಆಚರಿಸುವ ಹಬ್ಬವಾಗಿದೆ. ಹಬ್ಬದ ವಾರದ ಮೊದಲೇ ಆಚರಣೆಗೆ, ಸಿದ್ಧತೆಗಳು ಆರಂಭವಾಗುತ್ತದೆ. ಯಾವ ರೀತಿಯ ಗಣೇಶನನ್ನು ತರಬೇಕು, ಹೇಗೆ ಮಂಟಪದ ತಯಾರಿ ಮಾಡಬೇಕು ಎನ್ನುವುದರಿಂದ ಶುರುವಾದರೆ ಯಾವ ತಿಂಡಿ ತಿನಿಸುಗಳನ್ನು ಗಣಪನಿಗೆ ನೈವೇದ್ಯ ಮಾಡಬೇಕು ಎಂದು ಆಲೋಚಿಸಿ ಸಿದ್ಧತೆ ಮಾಡುವಾಗ ಹಬ್ಬದ ದಿನ ಬಂದಿರುತ್ತದೆ.
ಈ ವರ್ಷ ಗಣೇಶ ಚತುರ್ಥಿಯು ಆಗಸ್ಟ್ 27ರ ಬುಧವಾರದಂದು ಬಂದಿದ್ದು, ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಹಬ್ಬಕ್ಕೆ ಏನೆಲ್ಲಾ ನೈವೇದ್ಯ ಮಾಡಬಹುದು ಎಂದು ತಿಳಿಯೋಣ ಬನ್ನಿ.
ಗಣೇಶ ಚತುರ್ಥಿಯ ಮಹತ್ವ
ಗಣಪತಿಯನ್ನು ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಯಾವುದೇ ಕಾರ್ಯಕ್ರಮದ ಮೊದಲು ಗಣಪನಿಗೆ ಪೂಜೆ ಸಲ್ಲಿಸಿ ವಿಘ್ನ ವಿನಾಯಕನನ್ನು ನೆನೆಯುತ್ತಾರೆ. ಚೌತಿ ದಿನದಂದು ಗಣಪತಿಯನ್ನು ಭಕ್ತಿಭಾವದಿಂದ ಪೂಜಿಸಿ, ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ದಿನದ ವಿಶೇಷತೆಯೆಂದರೆ, ಗಣಪತಿಗೆ ಕನಿಷ್ಠ 21 ಬಗೆಯ ಖಾದ್ಯಗಳನ್ನು ತಯಾರಿಸಿ ಅರ್ಪಿಸುವ ಸಂಪ್ರದಾಯವಿದೆ. ಇದರಿಂದ ಭಕ್ತರಿಗೆ ಶ್ರೇಯಸ್ಸು ಮತ್ತು ಸಂತೋಷ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಗಣಪತಿಗೆ ಪ್ರಿಯವಾದ ನೈವೇದ್ಯಗಳು
ಗಣೇಶನಿಗೆ ಮೋದಕ, ಕಡುಬು, ಮತ್ತು ಪಂಚಕಜ್ಜಾಯ ಬಹಳ ಪ್ರಿಯವಾದ ಖಾದ್ಯಗಳು. ಈ ತಿನಿಸುಗಳನ್ನು ಚೌತಿ ಹಬ್ಬದ ದಿನ ತಪ್ಪದೇ ತಯಾರಿಸಲಾಗುತ್ತದೆ. ಇವುಗಳ ಜೊತೆಗೆ ಕರ್ಜಿಕಾಯಿ, ಹೆಸರುಕಾಳು ಉಸುಳಿ, ಲಡ್ಡು, ಚಕ್ಕಲಿ, ಕೋಡುಬಳೆ ಮುಂತಾದ ವಿವಿಧ ತಿನಿಸುಗಳನ್ನು ಭಕ್ತರು ತಮ್ಮ ಶಕ್ತಿಯನುಸಾರ ತಯಾರಿಸಿ ಗಣಪತಿಗೆ ಅರ್ಪಿಸುತ್ತಾರೆ. ಈ ಖಾದ್ಯಗಳನ್ನು ನೈವೇದ್ಯವಾಗಿ ಇಡುವುದರಿಂದ ಗಣಪತಿಯ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಇತರ ಹಬ್ಬಗಳಲ್ಲಿ ಸಾಮಾನ್ಯವಾಗಿ ಸಿಹಿತಿನಿಸುಗಳಾದ ಪಾಯಸ, ಕಡುಬು, ಅಥವಾ ಉಂಡೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಆದರೆ ಗಣೇಶ ಚತುರ್ಥಿಯಂದು ಯಾವುದೇ ರೀತಿಯ ಖಾದ್ಯವನ್ನು ತರಕಾರಿ, ಸೊಪ್ಪು, ಅಥವಾ ಇತರ ಭಕ್ಷ್ಯಗಳನ್ನು ನೈವೇದ್ಯವಾಗಿ ಇಟ್ಟು ಪ್ರಸಾದವಾಗಿ ಸೇವಿಸಬಹುದು.
ಗಣೇಶ ಚತುರ್ಥಿಯ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸಬಾರದು. ಈ ಆಹಾರಗಳು ಮನಸ್ಸನ್ನು ಚಂಚಲಗೊಳಿಸುವುದರಿಂದ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆಯಿದೆ. ಇದರಿಂದ ಕೆಲಸದಲ್ಲಿ ಶ್ರದ್ಧೆ ಕಡಿಮೆಯಾಗಬಹುದು. ಅಲ್ಲದೆ, ಮಾಂಸಾಹಾರವನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಆದರೆ, ಯಾವುದೇ ರೀತಿಯ ಸೊಪ್ಪು ಅಥವಾ ತರಕಾರಿಗಳನ್ನು ಸೇವಿಸಲು ಯಾವುದೇ ನಿರ್ಬಂಧವಿಲ್ಲ. ಭಕ್ತರು ತಮ್ಮ ಇಷ್ಟದ ಖಾದ್ಯಗಳನ್ನು ತಯಾರಿಸಿ, ಗಣಪತಿಗೆ ಅರ್ಪಿಸಿ, ಪ್ರಸಾದವಾಗಿ ಸೇವಿಸಬಹುದು.
ಗಣೇಶ ಚತುರ್ಥಿಯಂದು ಭಕ್ತರು ಶುಭ್ರವಾಗಿ, ಭಕ್ತಿಭಾವದಿಂದ ಗಣಪತಿಯನ್ನು ಪೂಜಿಸುತ್ತಾರೆ. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ, ವಿಧಿವಿಧಾನದಂತೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ದಿನದಂದು 21 ಬಗೆಯ ಖಾದ್ಯಗಳನ್ನು ತಯಾರಿಸುವುದು ಸಾಂಪ್ರದಾಯಿಕವಾದರೂ, ಭಕ್ತರು ತಮ್ಮ ಶಕ್ತಿಗೆ ತಕ್ಕಂತೆ ಕಡಿಮೆ ಖಾದ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸಬಹುದು. ಈ ಖಾದ್ಯಗಳನ್ನು ತಯಾರಿಸುವಾಗ ಶುಚಿತ್ವಕ್ಕೆ ವಿಶೇಷ ಒತ್ತು ನೀಡಲಾಗುತ್ತದೆ. ಗಣಪತಿಯ ಪೂಜೆಯ ನಂತರ ಈ ಖಾದ್ಯಗಳನ್ನು ಪ್ರಸಾದವಾಗಿ ಎಲ್ಲರೂ ಸೇವಿಸುತ್ತಾರೆ. ಇದರಿಂದ ಗಣಪತಿಯ ಕೃಪೆಗೆ ಪಾತ್ರರಾಗುವ ನಂಬಿಕೆ ಇದೆ.
ಗಣೇಶ ಚತುರ್ಥಿಯು ಭಕ್ತಿಯ ಜೊತೆಗೆ ಸಂತೋಷ ಮತ್ತು ಶ್ರೇಯಸ್ಸಿನ ಸಂಕೇತವಾಗಿದೆ. ಈ ದಿನ ಗಣಪತಿಗೆ ವಿವಿಧ ಖಾದ್ಯಗಳನ್ನು ಅರ್ಪಿಸುವುದರಿಂದ ವಿಘ್ನಗಳು ದೂರವಾಗಿ, ಜೀವನದಲ್ಲಿ ಸುಖ-ಶಾಂತಿಯುಂಟಾಗುವುದೆಂಬ ನಂಬಿಕೆ ಇದೆ. ಗಣಪತಿಯ ಪ್ರಿಯ ಖಾದ್ಯಗಳಾದ ಮೋದಕ, ಕಡುಬು, ಪಂಚಕಜ್ಜಾಯದ ಜೊತೆಗೆ ಇತರ ತಿನಿಸುಗಳನ್ನು ತಯಾರಿಸಿ, ಭಕ್ತಿಯಿಂದ ಅರ್ಪಿಸುವುದು ಈ ಹಬ್ಬದ ಮುಖ್ಯ ಆಕರ್ಷಣೆ. ಈ ಚೌತಿಯಂದು ಎಲ್ಲರೂ ಗಣಪತಿಯ ಕೃಪೆಗೆ ಪಾತ್ರರಾಗಲಿ ಎಂಬುದೇ ಆಶಯ.