ವಾರಾಣಸಿ, ಆಗಸ್ಟ್ 31: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗಂಗಾ ನದಿಯ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ನಗರದ ಪ್ರಮುಖ 84 ಘಾಟ್‌ಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ನದಿ ತೀರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪ್ರವಾಹದ ಆತಂಕ ಎದುರಾಗಿದೆ.
ಸದ್ಯ ಗಂಗಾ ನದಿಯು 69.40 ಮೀಟರ್ ಮಟ್ಟದಲ್ಲಿ ಹರಿಯುತ್ತಿದ್ದು, ಎಚ್ಚರಿಕೆಯ ಮಟ್ಟ 70.262 ಮೀಟರ್ ಹಾಗೂ ಅಪಾಯದ ಮಟ್ಟ 71.26 ಮೀಟರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯ ನೀರಿನ ಮಟ್ಟ ಗಂಟೆಗೆ ಸುಮಾರು 4 ಸೆಂ.ಮೀ.ನಷ್ಟು ಏರಿಕೆಯಾಗುತ್ತಿದೆ. ನೀರಿನ ಮಟ್ಟ ಏರಿಕೆಯಿಂದಾಗಿ ನಮೋ ಘಾಟ್‌ನಲ್ಲಿರುವ ‘ನಮಸ್ತೆ’ ವಿಗ್ರಹವೂ ನೀರಿನಲ್ಲಿ ಮುಳುಗಿದೆ.
ದೋಣಿ ಸಂಚಾರಕ್ಕೆ ಬ್ರೇಕ್
ಗಂಗಾ ನದಿಯಲ್ಲಿ ನೀರಿನ ಹರಿವು ಹಾಗೂ ಪ್ರವಾಹದ ರಭಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೋಣಿ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ತೀರಕ್ಕೆ ತೆರಳದಂತೆ ಪ್ರವಾಸಿಗರು ಹಾಗೂ ಭಕ್ತರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಗಂಗಾ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮ ವರುಣಾ ನದಿಯಲ್ಲೂ ಹಿಮ್ಮುಖ ಹರಿವು ಉಂಟಾಗಿದೆ. ಇದರಿಂದ ವರುಣಾ ನದಿಯ ದಂಡೆಯಲ್ಲಿರುವ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳಿಗೂ ನೀರು ಪ್ರವೇಶಿಸಿದೆ. ಪರಿಣಾಮವಾಗಿ ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಆರಂಭಿಸಿದ್ದಾರೆ.
61 ಪರಿಹಾರ ಶಿಬಿರಗಳ ಸ್ಥಾಪನೆ
ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ವಾರಾಣಸಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನಗರದ ವಿವಿಧ ಪ್ರದೇಶಗಳಲ್ಲಿ 61 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿಗೆ ಸ್ಥಳಾಂತರಗೊಳ್ಳುವ ಜನರಿಗೆ ವಸತಿ, ಆಹಾರ, ಕುಡಿಯುವ ನೀರು, ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಪ್ರವಾಹ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡಲು 21 ಪ್ರವಾಹ ಕಾವಲು ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 198 ದೋಣಿಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ವಾಟರ್ ಪೊಲೀಸ್ ಮತ್ತು ಬಿಎಸ್‌ಎಫ್ ತಂಡಗಳನ್ನು ಕೂಡ ಅಗತ್ಯ ಸಂದರ್ಭದಲ್ಲಿ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ.
ದನಕರುಗಳ ಸುರಕ್ಷತೆಗೂ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಅವುಗಳಿಗೆ ಮೇವು, ನೀರು ಮತ್ತು ಆಶ್ರಯದ ವ್ಯವಸ್ಥೆ ಮಾಡಲಾಗಿದೆ.
ಮೇಲ್ಭಾಗದಲ್ಲಿ ಗಂಗಾ ಆರತಿ
ಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ದಶಾಶ್ವಮೇಧ ಘಾಟ್ ಸೇರಿದಂತೆ ಪ್ರಮುಖ ಘಾಟ್‌ಗಳಲ್ಲಿ ನಡೆಯುವ ಸಾಯಂಕಾಲದ ಗಂಗಾ ಆರತಿಯಲ್ಲಿ ಬದಲಾವಣೆ ಮಾಡಲಾಗಿದೆ. ನದಿಯ ಮೆಟ್ಟಿಲುಗಳ ಬದಲಿಗೆ ಮೇಲ್ಭಾಗದಲ್ಲಿರುವ ಸುರಕ್ಷಿತ ಸ್ಥಳಗಳಲ್ಲಿ ಆರತಿಯನ್ನು ನೆರವೇರಿಸಲಾಗುತ್ತಿದೆ.
ನದಿಯ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಡಳಿತ ಸೂಚಿಸಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರವಾಸಿಗರು ಮತ್ತು ಭಕ್ತಾದಿಗಳು ಅನಗತ್ಯವಾಗಿ ನದಿ ತೀರಕ್ಕೆ ತೆರಳದಂತೆ ಹಾಗೂ ದೋಣಿ ಸಂಚಾರದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.





