ನವದೆಹಲಿ, ಆಗಸ್ಟ್ 31: ಸೆಪ್ಟೆಂಬರ್ 5ರಂದು ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಮೆರವಣಿಗೆಯಿಂದ ಯಾವುದೇ ಅನಾಹುತ ಅಥವಾ ಅಹಿತಕರ ಘಟನೆ ಸಂಭವಿಸಲಿದೆ ಎಂಬುದಕ್ಕೆ ಸದ್ಯ ಯಾವುದೇ ಬಲವಾದ ಕಾರಣಗಳು ಕಂಡುಬರುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕೇಂದ್ರ ಹಾಗೂ ದೆಹಲಿ ಸರ್ಕಾರದ ಜವಾಬ್ದಾರಿಯಾಗಿದ್ದು, ಅಗತ್ಯವಿದ್ದರೆ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಲ್ಲಾ ಪಕ್ಷಗಳು ಶಾಂತಿಯುತವಾಗಿ ಹಾಗೂ ಕಾನೂನಿನ ಚೌಕಟ್ಟಿನೊಳಗೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ನ್ಯಾಯಪೀಠ ಹೇಳಿದೆ. ಮೆರವಣಿಗೆ ವೇಳೆ ಯಾವುದೇ ಗಂಭೀರ ಅಥವಾ ಅಹಿತಕರ ಘಟನೆ ಸಂಭವಿಸಿದರೆ, ನ್ಯಾಯಾಂಗದ ವ್ಯಾಪ್ತಿಗೆ ಬರುವ ವಿಷಯವಾಗಿದ್ದಲ್ಲಿ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
ಸೆ.5ರಂದು ಏಕೆ ಪ್ರತಿಭಟನೆ?
ಜುಲೈ 25ರಂದು ಜಂತರ್ ಮಂತರ್‌ನಲ್ಲಿ ನಡೆದ ಸುದೀರ್ಘ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು CJP ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಸಲು ಸಂಘಟನೆ ನಿರ್ಧರಿಸಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು ಹಾಗೂ NEET ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಭರವಸೆ ನೀಡಿತ್ತು ಎಂದು CJP ಹೇಳಿದೆ. ಆದರೆ ಈ ಭರವಸೆಗಳು ಇನ್ನೂ ಜಾರಿಯಾಗಿಲ್ಲ ಎಂಬುದು ಸಂಘಟನೆಯ ಆರೋಪವಾಗಿದೆ.
ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಹಾಗೂ ಹಿಂದಿನ ಪ್ರತಿಭಟನೆಗಳಲ್ಲಿ ಪೊಲೀಸ್ ದೌರ್ಜನ್ಯ ಆರೋಪ ಎದುರಿಸಿದವರು ಮೆರವಣಿಗೆಗೆ ನೇತೃತ್ವ ನೀಡಲಿದ್ದಾರೆ ಎನ್ನಲಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಕೂಡ ಮೆರವಣಿಗೆಗೆ ಬೆಂಬಲ ವ್ಯಕ್ತಪಡಿಸಿದೆ.
ಜುಲೈ 20ರ ಘಟನೆಗಳ ತನಿಖೆ
ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸ್ ದೌರ್ಜನ್ಯ, ಅತಿಯಾದ ಬಲಪ್ರಯೋಗ, ಪ್ರತಿಭಟನಾಕಾರರಿಂದ ಹಿಂಸಾಚಾರ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾದ ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಈಗಾಗಲೇ ಐವರು ಸದಸ್ಯರ ಉನ್ನತಾಧಿಕಾರದ ಸಮಿತಿಯನ್ನು ರಚಿಸಿದೆ.
ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ರವಿಶಂಕರ್ ಝಾ ಮತ್ತು ಶಾಲಿಂದರ್ ಕೌರ್, ಮಾಜಿ ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಹಾಗೂ ನಿವೃತ್ತ ಮೇಘಾಲಯ ಡಿಜಿಪಿ ಎಲ್.ಆರ್. ಬಿಷ್ಣೋಯ್ ಇದ್ದಾರೆ.
ಜುಲೈ 20ರ ಘಟನೆಗೆ ಸಂಬಂಧಿಸಿದ ದೂರುಗಳು ಮತ್ತು ದಾಖಲೆಗಳನ್ನು ಈ ಸಮಿತಿಗೆ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ. ಪ್ರಕರಣವನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಲಾಗಿದ್ದು, ಅಲ್ಲಿಯವರೆಗೆ ಸೆ.5ರ ಮೆರವಣಿಗೆಯ ಕುರಿತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಸರ್ಕಾರಗಳ ಮೇಲೆಯೇ ಇರಲಿದೆ.





