ಯುವ ಹಾಗೂ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ತಮ್ಮ ಪರಂಪರೆಯನ್ನು ಮುಂದುವರಿಸಿರುವ ರಿಷಬ್ ಶೆಟ್ಟಿ, ಈಗ ‘MAGICC’ ಕಿರುಚಿತ್ರದ ಮೂಲಕ ಮತ್ತೊಮ್ಮೆ ಹೊಸ ತಂಡಕ್ಕೆ ಆಸರೆಯಾಗಿದ್ದಾರೆ.
ನವನಿರ್ದೇಶಕ ಶಿವಚಿರಂತನ ನಿರ್ದೇಶನದ ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರವು ಶಬ್ದ ಮತ್ತು ಆತ್ಮಾವಲೋಕನದ ಸುತ್ತ ಸಾಗುವ ಅದ್ಭುತ ಕಥಾಹಂದರವನ್ನು ಹೊಂದಿದೆ.
“ಸುತ್ತಲಿನ ಸದ್ದು ಅಡಗಿದಾಗ, ಉಳಿಯುವುದೇನು?” ಎಂಬ ಆಳವಾದ ಚಿಂತನೆ ಈ ಚಿತ್ರದ ಮುಖ್ಯ ವಸ್ತುವಾಗಿದೆ. ಪ್ರಖ್ಯಾತ ಬರಹಗಾರ ಜೋಗಿ (ಗಿರೀಶ್ ರಾವ್ ಹತ್ವಾರ್) ಈ ಕಿರುಚಿತ್ರಕ್ಕೆ ಕಥೆ ಬರೆದಿದ್ದಾರೆ. ರಿಷಬ್ ಶೆಟ್ಟಿ, ವಿ ರವಿ ಕುಮಾರ್, ಆದಿತ್ಯ ಬಿ ಪೂಜಾರ್ ಮತ್ತು ಶಿವಚಿರಂತನ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ‘ಮನ್ಪ್ರಸಾದ್ ಕ್ರಿಯೇಷನ್ಸ್’ ಮತ್ತು ‘ಷಟ್ಟರ್ ಸ್ಪೇಸ್’ ಸಹ-ನಿರ್ಮಾಣ ಮಾಡಿವೆ.
ಚಿತ್ರವು ಬಲವಾದ ತಾಂತ್ರಿಕ ತಂಡವನ್ನು ಹೊಂದಿದ್ದು, ಭುವನ್ ರೆಡ್ಡಿ ಛಾಯಾಗ್ರಹಣ, ನಚಿಕೇತ್ ಶರ್ಮಾ ಸಂಗೀತ, ಗೌತಮ್ ಸರಟೂರ್ ಸಂಕಲನ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಎಂ ಆರ್ ರಾಜಕೃಷ್ಣನ್ ಅವರ ಧ್ವನಿ ವಿನ್ಯಾಸ (Sound Design) ಚಿತ್ರಕ್ಕಿದೆ. ರಮೇಶ್ ಸಿ ಪಿ ಅವರ ವರ್ಣವಿನ್ಯಾಸ (Colorist), ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನ, ರೋಹಿತ್ ಚಿಕ್ಕಮಗಳೂರು ಅವರ ಪೋಸ್ಟ್ ಪ್ರೊಡಕ್ಷನ್ ಮೇಲ್ವಿಚಾರಣೆ ಹಾಗೂ ಅನೀಶ್ ಶರ್ಮಾ ಮತ್ತು ಪಟಾ ಪೋಸ್ಟರ್ಸ್ ಅವರ ಪೋಸ್ಟರ್ ವಿನ್ಯಾಸ ಈ ಚಿತ್ರಕ್ಕಿದೆ.
‘MAGICC’ ಕಿರುಚಿತ್ರವು ಈಗ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಜಿಟಲ್ ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ.





