ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭೀಕರ ಬಿರುಗಾಳಿ, ಸಿಡಿಲು ಮತ್ತು ಧಾರಾಕಾರ ಮಳೆಯಿಂದ ಭಾರೀ ಹಾನಿಯಾಗಿದೆ. ಈ ದುರಂತದಲ್ಲಿ ಕನಿಷ್ಠ 89 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾವಾರು ಸಾವಿನ ವಿವರ:
-
-
- ಪ್ರಯಾಗ್‌ರಾಜ್: 21 ಮಂದಿ ಮೃತಪಟ್ಟಿದ್ದಾರೆ
- ಸಂತ ರವಿದಾಸ್ ನಗರ 14 ಮಂದಿ ಸಾವು
- ಫತೇಪುರ್: 11 ಮಂದಿ ಬಲಿ
- ಮಿರ್ಜಾಪುರ್: 10 ಮಂದಿ ಸಾವು
-
ಇನ್ನೂ ಹಲವು ಜಿಲ್ಲೆಗಳಲ್ಲಿ ಸಾವುಗಳು ವರದಿಯಾಗಿವೆ. ಬಿರುಗಾಳಿಯಿಂದ ೫೩ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 114ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ರಾಜ್ಯಾದ್ಯಂತ ಕನಿಷ್ಠ 87 ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಮರಗಳು ಉರುಳಿ ಬೀಳುವುದು ಮತ್ತು ಗೋಡೆ ಕುಸಿತದಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಮ ದುರಂತದ ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳ ಒಳಗೆ ಪರಿಹಾರ ಧನ ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಕ್ಷಣದ ನೆರವು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಮತ್ತು ಹಾನಿಗೊಳಗಾದ ಮನೆಗಳ ಪುನರ್ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಬಿರುಗಾಳಿ ಮತ್ತು ಸಿಡಿಲು ಹೆಚ್ಚಾಗಿರುವುದರಿಂದ ರೈತರ ಬೆಳೆಗಳು, ಹಣ್ಣು-ತರಕಾರಿ ತೋಟಗಳು ಮತ್ತು ವಿದ್ಯುತ್ ಸಂಪರ್ಕಕ್ಕೂ ಭಾರೀ ಹಾನಿ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಸಹ ಸ್ಥಗಿತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದು ಸಂಚಾರಕ್ಕೂ ಅಡ್ಡಿಯಾಗಿದೆ.
ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಕಾಲ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಇನ್ನೂ ಬಿರುಗಾಳಿ ಮತ್ತು ಸಿಡಿಲು ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಜನರು ಅಗತ್ಯವಿಲ್ಲದೆ ಹೊರಗಡೆ ತಿರುಗಾಡದಂತೆ ಸೂಚಿಸಲಾಗಿದೆ.
ಈ ದುರಂತವು ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ನೈಸರ್ಗಿಕ ವಿಕೋಪಗಳಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳು ಇನ್ನೂ ಹೆಚ್ಚಿವೆ ಆದ್ದರಿಂದ ಜನರು ಆದಷ್ಟು ಜಾಗರೂಕವಾಗಿ ಆಚೆ ತಿರುಗಾಡಬೇಕು ಎಂದು ಹವಾಮಾನ ಇಲಾಖೆ ಮನವಿ ಮಾಡಿದೆ.




